ತಾಯಿಯೊಂದಿಗೆ ಮಲಗಿದ್ದ ಅಪ್ರಾಪ್ತೆಯನ್ನು ಮಧ್ಯರಾತ್ರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಪಾಣಿಪತ್​: ಮನೆಯಲ್ಲಿ ತಾಯಿಯೊಂದಿಗೆ ಮಲಗಿದ್ದ ಹದಿನೇಳು ವರ್ಷದ ಹುಡುಗಿಯನ್ನು ಮಧ್ಯರಾತ್ರಿ ವೇಳೆ ಮೈದಾನಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆನ್ನಲಾದ ಘಟನೆ ಪಾಣಿಪತ್​ನ ಸೋನಾಲಿಯಲ್ಲಿ ನಡೆದಿದೆ.

ಕಳೆದ ಗುರುವಾರ ರಾತ್ರಿ ಊಟ ಮುಗಿಸಿದ ಸಂತ್ರಸ್ತೆ ತನ್ನ ಮೂವರು ಸಹೋದರಿಯರು ಹಾಗೂ ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದರು. ಒಂದೇ ಕೊಠಡಿಯಲ್ಲಿ ಪ್ರತ್ಯೇಕ ಮಂಚದಲ್ಲಿ ಐವರು ಮಲಗಿದ್ದರು.

ಸುಮಾರು 11 ಗಂಟೆ ಸಮಯದಲ್ಲಿ ಇಬ್ಬರು ಆರೋಪಿಗಳಾದ ಹಶಿಮ್​ ಮತ್ತು ಇಶ್ರಾರ್ ಆರು ಅಡಿಯ ಕಾಂಪೌಂಡ್​​ ಏರಿ ಮನೆಯ ಒಳಗೆ ಬಂದು ಮನೆಯವರು ಮಲಗಿದ್ದ ಕೊಠಡಿಯೊಳಗೆ ಪ್ರವೇಶಿಸಿದ್ದಾರೆ. ಗಾಢ ನಿದ್ರೆಯಲ್ಲಿದ್ದ ಅಪ್ರಾಪ್ತೆಯ ಬಾಯಿ ಮುಚ್ಚಿ ಆರೋಪಿಗಳು ಆಚೆಗಿನ ಮೈದಾನಕ್ಕೆ ಎಳೆದೊಯ್ದಿದ್ದಾರೆ. ಈ ವೇಳೆ ಮತ್ತೆ ಆರು ಜನ ಅವರೊಂದಿಗೆ ಸೇರಿ ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಎರಡು ಗಂಟೆಯ ನಂತರ ಸಂತ್ರಸ್ತೆಯನ್ನು ಮನೆಯ ಹೊರಭಾಗದಲ್ಲಿ ಬಿಟ್ಟು ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಸಂತ್ರಸ್ತೆ ಧೈರ್ಯದಿಂದ ತನಗಾದ ಅನ್ಯಾಯವನ್ನು ತಾಯಿಯ ಬಳಿ ಘಟನೆ ನಡೆದ ಬೆಳಗ್ಗೆ ಅಂದರೆ ಶುಕ್ರವಾರ ಹೇಳಿಕೊಂಡಿದ್ದಾಳೆ. ನಂತರ ಆಕೆಯ ಕುಟುಂಬ ಪೊಲೀಸರಿಗೆ ಹೋಗಿ ದೂರು ನೀಡಲು ನಿರ್ಧರಿಸಿದ್ದಾರೆ.

ಇದನ್ನು ತಿಳಿದ ಆರೋಪಿಗಳು ಸಂತ್ರಸ್ತೆಯ ಮನೆಗೆ ಹೋಗಿ ದೂರು ದಾಖಲಿಸದಂತೆ ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಆದರೂ ಹೆದರದೆ ಕುಟುಂಬದವರು ಆಕೆಯನ್ನು ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)