ಆಸ್ಟ್ರೇಲಿಯಾದ ಭಾರತೀಯ ರಾಯಭಾರ ಕಚೇರಿಗೆ ಶಂಕಾಸ್ಪದ ಪ್ಯಾಕೇಜ್​

ಕ್ಯಾನ್​ಬೆರಾ: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೇರಿದಂತೆ 10 ರಾಷ್ಟ್ರಗಳ ರಾಜತಾಂತ್ರಿಕ ಕಚೇರಿಗಳಲ್ಲಿ ಶಂಕಿತ ಪ್ಯಾಕೇಜ್​ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬುಧವಾರ ಸೇಂಟ್​ ಕಿಲ್ಲದ ರೋಡ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಸೇರಿ ಯುನೈಟೆಡ್​ ಕಿಂಗ್​ಡಮ್​, ಕೊರಿಯಾ, ಜರ್ಮನಿ, ಇಟಲಿ, ಸ್ವಿಜರ್​ಲೆಂಡ್​, ಗ್ರೀಕ್​, ಇಂಡೋನೇಷಿಯಾ, ಪಾಕಿಸ್ತಾನ ರಾಯಭಾರ ಕಚೇರಿಗೂ ಶಂಕಿತ ಪ್ಯಾಕೇಜ್​ ಬಂದಿತ್ತು. ತಕ್ಷಣ ಆಸ್ಟ್ರೇಲಿಯಾ ಪೊಲೀಸರು ಸ್ಥಳಕ್ಕೆ ತೆರಳಿ ಶಂಕಿತ ವಸ್ತುವನ್ನು ವಶಕ್ಕೆ ಪಡೆದಿದ್ದು, ಪ್ಯಾಕೇಜ್​ ಕಳುಹಿಸಿದವರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಸಿಡ್ನಿಯಲ್ಲಿರುವ ಅರ್ಜೆಂಟೀನಾ ರಾಯಭಾರ ಕಚೇರಿಗೆ ಶಂಕಿತ ಬಿಳಿ ಬಣ್ಣದ ಪುಡಿಯನ್ನು ಕಳುಹಿಸಲಾಗಿತ್ತು. ಈ ಘಟನೆ ನಡೆದ ಎರಡೇ ದಿನಗಳಲ್ಲಿ 10 ರಾಯಭಾರ ಕಚೇರಿಗಳಿಗೆ ಶಂಕಿತ ಪ್ಯಾಕೇಜ್​ ಕಳುಹಿಸಲಾಗಿದೆ.

ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಟೀಕಿಸುವವರನ್ನು ಗುರಿಯಾಗಿಸಿಕೊಂಡು 12 ಶಂಕಿತ ಪ್ಯಾಕೇಜ್​ ಮತ್ತು ಪೈಪ್​ ಬಾಂಬ್​ಗಳನ್ನು ಕಳುಹಿಸಲಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ, ಹಿಲರಿ ಕ್ಲಿಂಟನ್​ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಮನೆಗಳಿಗೆ ಪ್ಯಾಕೇಜ್​ ಡೆಲಿವರಿಯಾಗಿತ್ತು. ಈ ಪ್ರಕರಣದ ಸಂಬಂಧ ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *