ಕ್ರಿಕೆಟಿಗರಿಗೆ ನಡವಳಿಕೆ ಸಮಾಲೋಚನೆ

ನವದೆಹಲಿ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಹೊಸ ಯೋಜನೆಯೊಂದನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಇಂಥ ಅನುಚಿತ ಘಟನೆ ಭವಿಷ್ಯದಲ್ಲಿ ಮರುಕಳಿಸದಂತೆ ಭಾರತದ ತಂಡದ ಆಟಗಾರರಿಗೆ ನಡವಳಿಕೆಯ ಸಮಾಲೋಚನೆ ಕಾರ್ಯಕ್ರಮವನ್ನು ಆಯೋಜಿಸಲು ಸಿಒಎ ನಿರ್ಧರಿಸಿದೆ. ಇದು ಹಿರಿಯರ ರಾಷ್ಟ್ರೀಯ ತಂಡ ಮಾತ್ರವಲ್ಲದೆ, ಭಾರತ ಎ ತಂಡ, 19 ವಯೋಮಿತಿ ಸಹಿತ ಎಲ್ಲ ವಯೋಮಿತಿ ರಾಷ್ಟ್ರೀಯ ತಂಡದ ಆಟಗಾರರಿಗೂ ಕೌನ್ಸೆಲಿಂಗ್ ನಡೆಸುವ ಬಗ್ಗೆ ಸಿಒಎ ರ್ಚಚಿಸಿದೆ. ‘ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್​ಸಿಎ) ಬಿಹೇವಿಯರಲ್ ಕೌನ್ಸೆಲಿಂಗ್ ನಡೆಸಲಾಗುವುದು. ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್​ಗೆ ಅಂತ ಪ್ರತ್ಯೇಕ ಕೌನ್ಸೆಲಿಂಗ್ ಇರುವುದಿಲ್ಲ. ಗುತ್ತಿಗೆ ಆಟಗಾರರಾಗಿರುವುದರಿಂದ ಎಲ್ಲರೊಂದಿಗೆ ಇವರಿಬ್ಬರೂ ಇರಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 20ನೇ ವಯಸ್ಸಿಗೆ ಮುನ್ನ ಐಪಿಎಲ್​ನಲ್ಲಿ ಭಾರಿ ಮೊತ್ತದ ಒಪ್ಪಂದಗಳನ್ನು ಪಡೆಯುವ ಆಟಗಾರರಿಗೂ ಕೌನ್ಸೆಲಿಂಗ್ ಏರ್ಪಡಿಸಲಾಗುವುದು. ಇದಲ್ಲದೆ ಯುವ ಆಟಗಾರರಿಗೆ ‘ಜೆಂಡರ್ ಸೆನ್ಸಿಟಿವಿಟಿ ಪ್ರೋಗ್ರಾಂ’ ನಡೆಸುವಂತೆಯೂ ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿಗೆ ಸಲಹೆ ಬಂದಿದೆ ಎನ್ನಲಾಗಿದೆ. -ಪಿಟಿಐ