Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಭಕ್ತಸಮೂಹದ ಪಾದಯಾತ್ರೆ ವಾರಿ

Thursday, 19.07.2018, 3:03 AM       No Comments

ಕಳೆದ 1300 ವರ್ಷಗಳಿಂದಲೂ ಪಾಂಡುರಂಗನನ್ನು ಭೇಟಿಯಾಗಲು ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಬರುವ ವಿಶಿಷ್ಟ ಪರಂಪರೆಯೇ ವಾರಿ. ಕಾಲ ಬದಲಾದರೂ ಸಂಸ್ಕೃತಿ ಬದಲಾಗಿಲ್ಲ, ಭಕ್ತಿ ಕಡಿಮೆಯಾಗಿಲ್ಲ. ಬದಲಿಗೆ ಈ ಶ್ರೇಷ್ಠ ಮೌಲ್ಯಗಳು ಮಾನವನ ದೋಷಗಳನ್ನು ಕಳೆಯುತ್ತ ಭಗವಂತನೂ ಭಕ್ತರ ಭೇಟಿಗೆ ಕಾತರರಾಗುವಂತೆ ಮಾಡುತ್ತಿವೆ. 22 ದಿನಗಳ ವಾರಿ ಪ್ರೇಮ ಮತ್ತು ವಾತ್ಸಲ್ಯದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ಇಲ್ಲಿ ಕಲಿಯುವ ಪಾಠ ಲೌಕಿಕ ಬದುಕಿಗೂ, ಅಧ್ಯಾತ್ಮ ಸಾಧನೆಗೂ ದಾರಿದೀಪ.

| ರವೀಂದ್ರ ಎಸ್. ದೇಶಮುಖ್

ಆಷಾಢದ ಸುಂಟರಗಾಳಿ, ಧೋ ಎಂದು ಭೋರ್ಗರೆದು ಸುರಿಯುವ ವರ್ಷಧಾರೆ, ಘಾಟ್ ಪ್ರದೇಶದ ಕಿರಿದಾದ ರಸ್ತೆಗಳು, ಮಾವುಲಿ, ಮಾವುಲಿ ಎಂದು ಗಗನಭೇದಿಸುವ ನಾಮಸ್ಮರಣೆ, ಲಕ್ಷಾಂತರ ದನಿಗಳು, ಸಾವಿರಾರು ಕನಸುಗಳು, ಎದೆಯಲ್ಲಿ ಪ್ರೇಮದ ಬೆಳಕು, ಹೃದಯದ ಪಲ್ಲಕ್ಕಿಯಲ್ಲಿ ಪಾಂಡುರಂಗನ ಪ್ರಾಣಪ್ರತಿಷ್ಠೆ…

ಇವು ‘ವಾರಿ’ (ಯಾತ್ರೆ) ಎಂಬ ವಿಹಂಗಮ ಯಾತ್ರೆಯಲ್ಲಿ ಕಾಣುವ ಮನಮೋಹಕ ದೃಶ್ಯಗಳು! ಇಲ್ಲಿ ಮಾನವಿಯತೆಯ ಮುಖವಿದೆ, ಸೇವೆಯ ಆದರ್ಶವಿದೆ, ಶುದ್ಧ ಅಂತಃಕರಣದ ದರ್ಶನವಿದೆ. ಪ್ರೇಮದ, ವಾತ್ಸಲ್ಯದ ನಂಟಿದೆ. ಲಕ್ಷಾಂತರ ಜನರು ಒಟ್ಟಿಗೆ ಪಂಢರಪುರದ ಪಾಂಡುರಂಗನ ಭೇಟಿಗೆ ತೆರಳುವ ಇವರ ಜಾತಿ, ಧರ್ಮ, ಹೆಸರು ಒಂದೇ ಅದು ಮಾವುಲಿ. ಮಾವುಲಿ ಅಂದರೆ ಮರಾಠಿಯಲ್ಲಿ ತಾಯಿ. ಮಹಾರಾಷ್ಟ್ರದ ಆರಾಧ್ಯದೈವವಾಗಿರುವ ಪಾಂಡುರಂಗ ವಿಠ್ಠಲನನ್ನು ಅಲ್ಲಿನ ಜನರು ತಂದೆ-ತಾಯಿ ಎಂದೇ ಸಂಬೋಧಿಸುತ್ತಾರೆ. ಸಂತ ಜ್ಞಾನೇಶ್ವರರು ಮೊದಲು ಪಾಂಡುರಂಗನನ್ನು ಮಾವುಲಿ ಎಂದು ಕರೆದರು. ಇದು ಈಗ ಪರಂಪರೆಯಾಗಿಯೇ ಬೆಳೆದಿದ್ದು, ಯಾತ್ರೆಯಲ್ಲಿ ಯಾರೂ ಅವರ ಹೆಸರಿನಿಂದ ಕರೆಯುವುದಿಲ್ಲ. ಎಲ್ಲರೂ ಇಲ್ಲಿ ಮಾವುಲಿಗಳೇ. ನೋಡಿ, ಇಡೀ ಜಗತ್ತು, ಜನರೇ ತಾಯಿಯಾಗಿಬಿಟ್ಟರೆ ಸ್ವಾರ್ಥ, ದುಃಖಕ್ಕೆ ಎಲ್ಲಿದೆ ಜಾಗ! ಎಂಥ ಅದ್ಭುತ ಚೈತನ್ಯ ಪ್ರವಾಹ!

ಸಂತ ಜ್ಞಾನೇಶ್ವರರ ಸಮಾಧಿ ಸ್ಥಳ ಮತ್ತು ಚೈತನ್ಯಭೂಮಿ ಆಳಂದಿಯಿಂದ, ಸಂತ ತುಕಾರಾಮ್ ಮಹಾರಾಜರ ಸಮಾಧಿ ಸ್ಥಳ ಮತ್ತು ದಿವ್ಯತಾಣ ದೇಹುವಿನಿಂದ ಹೊರಡುವ ಪಲ್ಲಕ್ಕಿಗಳೊಡನೆ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲೇ ಸಾಗಿ ಆಷಾಢ ಏಕಾದಶಿಯ ಪಾವನ ದಿನದಂದು ಪಂಢರಪುರ ತಲುಪುತ್ತಾರೆ. ಪಾಂಡುರಂಗನ ದರ್ಶನದ ಧನ್ಯತೆಯೊಂದಿಗೆ ಮರಳುವ ಅವರಲ್ಲಿ ವಾರಿ ಅಭೂತಪೂರ್ವ ಜೀವನಸ್ಪೂರ್ತಿ ತುಂಬುತ್ತದೆ. ಸಂಸಾರದ ಸಾಗರ ದಾಟಲು ಪ್ರೇಮವೆಂಬ ನೌಕೆ, ಅದಕ್ಕೆ ಪಾಂಡುರಂಗನೇ ನಾವಿಕ ಎಂಬ ಭಾವ ಅವರನ್ನು ಸಾತ್ವಿಕವಾಗಿಸುತ್ತದೆ. ಮಹಾರಾಷ್ಟ್ರದ ಸಣ್ಣ ರೈತ, ಕಾರ್ವಿುಕನಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ಈ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ. ಇದು ವಿದೇಶಿಗರ ಪಾಲಿಗೆ ಅಚ್ಚರಿಯ ಆಗರವೇ ಆಗಿದ್ದು, ವರ್ಷದಿಂದ ವರ್ಷಕ್ಕೆ ವಾರಿಯಲ್ಲಿ ಪಾಲ್ಗೊಳ್ಳುವ ವಿದೇಶಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಬಾರಿ ಜುಲೈ 5ರಂದು ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಮರ ಪಲ್ಲಕ್ಕಿಗಳು ಹೊರಟಿದ್ದು, ಭಾರಿ ಮಳೆಯನ್ನು ಲೆಕ್ಕಿಸದೆ ಅಸಂಖ್ಯ ಜನರು ವಾರಿಯಲ್ಲಿ ಪಾಲ್ಗೊಂಡಿದ್ದಾರೆ. ಇದು ಬರೀ ಅಧ್ಯಾತ್ಮ ಯಾತ್ರೆಯಾಗಿ ಉಳಿದುಕೊಳ್ಳದೆ ಸಾಮಾಜಿಕ ಪರಿವರ್ತನೆಯ, ಕೆಡಕುಗಳ ನಿವಾರಣೆಯ ಆಂದೋಲನವಾಗಿ ಬದಲಾಗಿದೆ.

ವಾರಿ ಕಲಿಸುವ ಪಾಠಗಳು

ಸೇವೆ ಎಂಬ ಮಹಾಶಕ್ತಿ : ‘ಮಾವುಲಿ ತುಮ್ಚೆ ಪಾಯ್ ದುಖ್ತೇತ್ ಕಾಯ್? ಡೋಕ ದುಃಖತಯ?’ (ಮಾವುಲಿ ನಿಮ್ಮ ಕಾಲು ನೋವುತ್ತದೆಯೇ, ತಲೆನೋವಿದೆಯೇ?)-ಹೀಗೆ ಪ್ರೇಮಭಾವದಿಂದ ವಿಚಾರಿಸುವ ವೈದ್ಯರು ವಾರಕರಿಗಳನ್ನು ದೇವರ ಪ್ರತಿರೂಪವೆಂದೇ ಭಾವಿಸುತ್ತಾರೆ. ಅದಕ್ಕೆಂದೆ, ದಿನವಿಡೀ ನಡೆದು ರಾತ್ರಿ ವಾಸ್ತವ್ಯಕ್ಕೆ ಹಳ್ಳಿಯಲ್ಲೋ, ಗ್ರಾಮದ ಹೊರವಲಯದಲ್ಲೋ ನಿಲ್ಲುವ ವಾರಕರಿಗಳ ಬಳಿ ಹೋಗಿ ಅವರ ಕಾಲಿಗೆ ಮಾಲಿಶ್ ಮಾಡುತ್ತಾರೆ, ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಾರೆ. ಬಿಸಿನೀರಿನಿಂದ ಕಾಲು ತೊಳೆಯುತ್ತಾರೆ. ಮಳೆ, ಗಾಳಿ ಲೆಕ್ಕಿಸದೆ ಹೊರಟಿರುವ ಅವರ ಆರೋಗ್ಯದಲ್ಲಿ ಏರುಪೇರು ಆಗದಿರಲಿ ಎಂದು ಎಲ್ಲ ಬಗೆಯ ಕಾಳಜಿ ವಹಿಸುತ್ತಾರೆ. ‘ನಾನು’ ಎಂಬ ಅಹಂನ ಕೋಟೆ ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತಿರುವಾಗ ಇಲ್ಲಿ ಆ ‘ನಾನು’ ಎಂಬುದನ್ನು ತೊರೆದು ಸೇವೆಯಲ್ಲಿ ಒಂದಾಗುತ್ತಾರೆ. ಆ ಪಂಢರಿನಾಥನನ್ನು ಸಂತೋಷಗೊಳಿಸಬೇಕೆಂದರೆ ಮಾನವೀಯ ಸೇವೆಯೇ ಪರಮಶ್ರೇಷ್ಠ ದಾರಿ ಎಂದು ಅರಿತಿದ್ದಾರೆ. ಅಷ್ಟೆ ಅಲ್ಲ, ಗ್ರಾಮಸ್ಥರು ಊರಿನ ತುಂಬ ಚಿತ್ತಾಕರ್ಷಕ ರಂಗೋಲಿಗಳನ್ನು ರಚಿಸಿ ವಾರಕರಿಗಳನ್ನು ಸ್ವಾಗತಿಸುತ್ತಾರೆ. ಹೋಟೆಲಿನವರು ಉಚಿತ ತಿಂಡಿ, ಊಟ, ಚಹಾದ ವ್ಯವಸ್ಥೆ ಮಾಡುತ್ತಾರೆ. ಎಷ್ಟೋ ಜನ ಸಿಹಿಪದಾರ್ಥಗಳನ್ನು, ಹಣ್ಣುಹಂಪಲುಗಳನ್ನು ವಿತರಿಸುತ್ತಾರೆ. ಇಲ್ಲಿ ಮತ್ತೆ ಸಮಾಜ ‘ತಾಯಿ’(ಮಾವುಲಿ) ಸ್ಥಾನದಲ್ಲಿ ನಿಂತು ಪೊರೆಯುತ್ತದೆ ಎಂಬುದು ವಿಶೇಷ.

ಭಕ್ತಿಯ ಉತ್ಕಟತೆ: ನಾಮಸ್ಮರಣದ ಬಲದಿಂದಲೇ ಭಗವಂತನನ್ನು ಕಾಣಬಹುದು ಎಂಬ ಸಂದೇಶ ನೀಡಿದವನು ಪಾಂಡುರಂಗ. ಅದಕ್ಕೆಂದೆ, ಅಭಂಗಗಳ ಗಾಯನ, ಫುಗಡಿಯ ನೃತ್ಯ, ನಾಮಸ್ಮರಣೆಯ ಜಯಘೋಷ ಮುಗಿಲು ಮುಟ್ಟುತ್ತದೆ. ‘ಪುಂಡಲಿಕ ವರದ ಹರಿ ವಿಠ್ಠಲ ಶ್ರೀಜ್ಞಾನದೇವ ತುಕಾರಾಮ’, ‘ಪಂಢರಿನಾಥ ಮಹಾರಾಜ್ ಕೀ ಜೈ’ ‘ಪಂಢರಿನಾಥ ಭಗವಾನ್ ಕೀ ಜೈ’ ಎಂಬೆಲ್ಲ ಘೋಷಣೆಗಳು ಲಕ್ಷಾಂತರ ದನಿಗಳಲ್ಲಿ ಹೊರಹೊಮ್ಮುವಾಗಿನ ಆ ಭಾವಸಂಭ್ರಮ, ಸಕಾರಾತ್ಮಕ ವಾತಾವರಣ ಭಕ್ತಿಯ ಅಪೂರ್ವ ದರ್ಶನ ಮಾಡಿಸುತ್ತದೆ. ಶ್ರೀಹರಿಪಾಠ, ಜ್ಞಾನೋಬಾ ಚರಿತ್ರೆ ಪಾರಾಯಣ, ಕೀರ್ತನೆ, ಭಜನೆ ಅಖಂಡವಾಗಿ ನಡೆಯುತ್ತವೆ. ವಾರಕರಿಗಳ ದಣಿವು, ಹಸಿವು ನೀಗಿಸುವುದು ಈ ನಾಮಸ್ಮರಣೆಯ ಬಲವೇ.

ಯುವಶಕ್ತಿಯ ಜೋಶ್: ಹಿಂದೆಲ್ಲ ವಾರಿಯಲ್ಲಿ ರೈತರು, ಕೃಷಿಕಾರ್ವಿುಕರು, ಕುಶಲಕರ್ವಿುಗಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಚಿತ್ರಣ ಬದಲಾಗಿದೆ. ಜೀನ್ಸ್, ಟಿ ಶರ್ಟ್ ತೊಟ್ಟು ಕೊರಳಿಗೆ ಡಿಜಿಟಲ್ ಕ್ಯಾಮರಾ ಹಾಕಿಕೊಂಡು ಈ ಕ್ಷಣಗಳನ್ನೆಲ್ಲ ಸೆರೆಹಿಡಿಯುವ, ಅದನ್ನು ಪ್ರಪಂಚಕ್ಕೆ ದಾಟಿಸುವ ಕೆಲಸ ಯುವಶಕ್ತಿ ಮಾಡುತ್ತಿದೆ. ‘ಐಟಿ ದಿಂಡಿ’ ಶೀರ್ಷಿಕೆಯಲ್ಲಿ ಪುಣೆ ಹಾಗೂ ಸುತ್ತಮುತ್ತಲಿನ ನೂರಾರು ಐಟಿ ಇಂಜಿನಿಯರ್​ಗಳು ಪ್ರತಿ ವರ್ಷ ವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ಸಾಫ್ಟ್​ವೇರ್ ಇಂಜಿನಿಯರ್ ಮಂಗೇಶ್ ಮೋರೆ ಮತ್ತು ಸ್ನೇಹಿತರ ತಂಡ ಕಳೆದ ಎಂಟು ವರ್ಷಗಳಿಂದ ‘ಫೇಸ್​ಬುಕ್ ದಿಂಡಿ’ ಮುಖೇನ ಯಾತ್ರೆಯ ಕ್ಷಣ-ಕ್ಷಣದ ಮಾಹಿತಿ, ಚಿತ್ರ, ವಿಡಿಯೋಗಳನ್ನು ಜಗತ್ತಿಗೆ ತಲುಪಿಸುತ್ತಿದೆ. ಮುಖ್ಯವಾಗಿ, ಇಲ್ಲಿ ಪಾಲ್ಗೊಳ್ಳುವ ಯುವ ಮನಸ್ಸುಗಳು ಸಂವೇದನೆ, ಮಾನವೀಯತೆಯ ಶಕ್ತಿಯನ್ನು ಅರಿತುಕೊಳ್ಳುತ್ತಿದ್ದು ಈ ಶ್ರೇಷ್ಠ ಸಂಸ್ಕೃತಿಯ ಮೌಲ್ಯಗಳನ್ನು ವಿಸ್ತರಿಸಲು ಹಲವು ನೆಲೆಗಳಲ್ಲಿ ಯತ್ನಿಸುತ್ತಿದ್ದಾರೆ.

ಸಾಮಾಜಿಕ ಜಾಗೃತಿ: ಲಕ್ಷಾಂತರ ಜನರು ಒಂದೆಡೆ ಸೇರುವುದರಿಂದ ಸಾಮಾಜಿಕ ಜಾಗೃತಿಗೂ ವಾರಿ ಪ್ರಮುಖ ಮಾಧ್ಯಮವಾಗಿ ಬಳಕೆ ಆಗುತ್ತಿದೆ. ಸಮಾಜದ ಕೆಡಕುಗಳ ವಿರುದ್ಧ ಸಮರ ಸಾರಲು ಇದರಿಂದ ಸಾಧ್ಯವಾಗಿದೆ. ವಾರಕರಿಯಲ್ಲಿ ಪಾಲ್ಗೊಳ್ಳುವವರು ಸಾತ್ವಿಕ ಶಕ್ತಿಗಳು. ಇವರಲ್ಲಿ ಸಮಾಜಪರ ಸಂವೇದನೆಯನ್ನೂ ತುಂಬಿಬಿಟ್ಟರೆ ಸುಲಭ ಎಂಬ ಚಿಂತನೆಯಿಂದ ಹಲವು ಹೊಸ ಪ್ರಯೋಗಗಳು ನಡೆದಿವೆ. ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಸಾರಾಯಿ, ರೈತರ ಆತ್ಮಹತ್ಯೆ ವಿರುದ್ಧ ಹಲವು ಸಾಮಾಜಿಕ ಸಂಘಟನೆಗಳು ಜಾಗೃತಿ ಮೂಡಿಸಿವೆ. ಈ ಬಾರಿ ವಾರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ನೇತ್ರದಾನ, ದೇಹದಾನ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಸ್ತ್ರೀ  ಶಕ್ತಿ ದರ್ಶನ : ಪುರುಷರಷ್ಟೇ ಅಲ್ಲ ಅಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ವಾರಿಯಲ್ಲಿ ಭಾಗವಹಿಸುತ್ತಾರೆ. ಗ್ರಾಮದ ಹೊರವಲಯದಲ್ಲಿ ರಾತ್ರಿ ವಾಸ್ತವ್ಯಕ್ಕೆ ತಂಗಿದಾಗ ನೂರಾರು ಜನರಿಗೆ ಬಯಲಲ್ಲೇ ಅಡುಗೆ ಮಾಡುವ, ಅದನ್ನು ಅಷ್ಟೇ ಪ್ರೀತಿಯಿಂದ ಬಡಿಸುವ ಮಹಿಳೆಯರು ನಸುಕಿನ ಜಾವದಲ್ಲೇ ಕೀರ್ತನೆಯನ್ನೂ ಮಾಡುತ್ತಾರೆ. ಯಾರಾದರೂ ಆಯಾಸಗೊಂಡಿದ್ದರೆ ಅವರಲ್ಲಿ ಸ್ಪೂರ್ತಿ ತುಂಬುತ್ತ ತಮ್ಮ ಜತೆ ಮುಂದೆ-ಮುಂದೆ ಕರೆದುಕೊಂಡು ಹೋಗುತ್ತಾರೆ. ಮುಖ್ಯವಾಗಿ, ವಾರಿಯಲ್ಲಿ ಪಾಲ್ಗೊಳ್ಳುವ ಮಹಿಳೆ ಗಟ್ಟಿಸಂಕಲ್ಪದೊಂದಿಗೆ ಮನೆಗೆ ಮರಳುತ್ತಾಳೆ. ವಿದರ್ಭ ಪ್ರಾಂತ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಅಲ್ಲಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಲ್ಲ. ಮಹಿಳೆಯರಿಗೆ ಈ ಆತ್ಮಬಲ ಬಂದಿರುವುದೇ ವಾರಿಯಿಂದ ಎನ್ನುತ್ತಾರೆ ಸಾಮಾಜಿಕ ವಿಜ್ಞಾನಿಗಳು.

ಮ್ಯಾನೇಜ್​ವೆುಂಟ್ ಪಾಠ: ಇಷ್ಟು ದೊಡ್ಡ ಯಾತ್ರೆಯಲ್ಲಿ ಎಲ್ಲವೂ ಕರಾರುವಾಕ್ ಆಗಿ ನಡೆಯುತ್ತದೆ. ಜನಸಾಗರವೇ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರೂ ಗೊಂದಲಗಳಿಲ್ಲ, ನೂಕುನುಗ್ಗಲಿಲ್ಲ, ಅಶಿಸ್ತಿನ ಛಾಯೆಯಿಲ್ಲ. ವೇಳಾಪಟ್ಟಿಯಂತೆ ನಸುಕಿನ ಜಾವದಿಂದ ಹಿಡಿದು ರಾತ್ರಿವರೆಗೂ ಸುಗಮವಾಗಿ ನಡೆಯುತ್ತದೆ. ವಾರಕರಿಗಳ ಈ ಶಿಸ್ತು ಮ್ಯಾನೆಜ್​ವೆುಂಟ್​ನ ದೊಡ್ಡ ಪಾಠವಾಗಿದ್ದು, ಪರಂಪರೆಯ ಸೊಗಡು, ಆಧುನಿಕತೆಯ ವೈಶಿಷ್ಟ್ಯ ಎರಡೂ ಮಿಳಿತಗೊಂಡಿದೆ.

ವಾರಿ ಮಾರ್ಗ

ಸಂತ ಜ್ಞಾನೇಶ್ವರ ಪಲ್ಲಕ್ಕಿ

#ಆಳಂದಿ-ಪುಣೆ- ಸಾಸವಡ- ಲೋಣದ- ವಾಖರಿ- ಪಂಢರಪುರ ಸಂತ ತುಕಾರಾಮ ಮಹಾರಾಜ್ ಪಲ್ಲಕ್ಕಿ

# ದೇಹು-ಪುಣೆ- ಲೋಣಿಕಾಳೆಭೂರ-ಯವತ್- ವರವಂಡ- ಬಾರಾಮತಿ- ಇಂದ್ರಾಪುರ- ಅಕಲುಜ್-ವಾಖರಿ-ಪಂಢರಪುರ.

ಅಭಂಗ ವಿಟ್ಠಲ

ಟೊಂಕದ ಮ್ಯಾಲೆ ಕೈ ಇಟ್ಟಾನ

ಭಕ್ತೀ ಸುಂಕಾ ಬೇಡತಾನ

ಡೊಂಕ ಇಲ್ಲಾ, ಬಿಂಕ ಇಲ್ಲಾ

ಅಭಂಗ ಪದದವನ

ಅಭಂಗ ಪದದವನ

| ದ.ರಾ. ಬೇಂದ್ರೆ

ಜುಲೈ 23ಕ್ಕೆ ಸಂಪನ್ನ

ಈ ಪಲ್ಲಕ್ಕಿಗಳು ಜುಲೈ 22ರ ಸಂಜೆ ಪಾಂಡುರಂಗನ ಸನ್ನಿಧಾನವಾದ ಪಂಢರಪುರವನ್ನು ತಲುಪಲಿವೆ. 23ರಂದು ಆಷಾಢ ಏಕಾದಶಿ ಇದ್ದು, ಅಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದಂಪತಿ ಮತ್ತು ವಾರಕರಿ ದಂಪತಿ ಪಾಂಡುರಂಗ-ರುಕ್ಮಿಣಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. 27ರಂದು ಗೋಪಾಳಕಾಲಾ ಸಂಪನ್ನಗೊಂಡ ಬಳಿಕ ಯಾತ್ರಾರ್ಥಿಗಳು ಊರಿಗೆ ಮರಳುತ್ತಾರೆ.

Leave a Reply

Your email address will not be published. Required fields are marked *

Back To Top