ಗಣಿಗಾರಿಕೆಗೆ ಅವಕಾಶ ನೀಡಿದರೆ ಸಾಮೂಹಿಕ ಆತ್ಮಹತ್ಯೆ

ಪಾಂಡವಪುರ: ರಾಜಕೀಯ ಪ್ರಭಾವಕ್ಕೆ ಒಳಗಾಗಿ ಬೇಬಿ ಕಾವಲ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬೇಬಿ ಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಗಣಿ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಸುತ್ತಲಿನ ಪ್ರದೇಶದ ರೈತಾಪಿ ವರ್ಗದವರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳು ಗಣಿ ಮಾಲೀಕರ ಹಣದ ಅಮಿಷಕ್ಕೆ ಒಳಗಾಗಿ ಬೇಬಿ ಕಾವಲ್ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕವಾಗಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಅಕ್ರಮ ಗಣಿಗಾರಿಕೆ ಹಿಂದೆ ಯಾರು ನಿಂತಿದ್ದಾರೆ ಎಂಬುದು ಜನರಿಗೆ ಗೊತ್ತಿರುವ ವಿಚಾರ. ಹಣವಿರುವವರು ಗಣಿಗಾರಿಕೆ ಪ್ರಾರಂಭಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನ ಮುರಿದು ಗಣಿಗಾರಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಜತೆಗೆ ತಮ್ಮ ಒಡೆತನದಲ್ಲಿರುವ ಕ್ರಷರ್ ಯಂತ್ರಗಳನ್ನು ತೆರವುಗೊಳಿಸಿ ಇತರರಿಗೆ ಮಾದರಿ ಆಗಬೇಕು. ಗಣಿಗಾರಿಕೆ ಪುನಾರಂಭವಾದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆತಂದು ಬೇಬಿ ಬೆಟ್ಟದಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೇಬಿ ಗ್ರಾಮದ ಕುಮಾರ್, ನಾರಾಯಣ್, ನಟರಾಜು, ಪಟೇಲ್ ನಿಂಗಪ್ಪ, ಮುತ್ತಪ್ಪ, ನಾಗೇಂದ್ರ, ಅಪ್ಪಾಜಿ ಇತರರು ಇದ್ದರು.