ಅಂಬಿ ಮೇಲಿನ ಋಣ ತೀರಿಸಲು ರಾಜಕೀಯ ಪ್ರವೇಶ

ಪಾಂಡವಪುರ: ಅಂಬರೀಷ್ ಮೇಲಿನ ಋಣ ತೀರಿಸಲು ರಾಜಕೀಯಕ್ಕೆ ಬರಲು ಇಚ್ಛಿಸಿದ್ದೇನೆ ಹೊರತು ಬೇರೆ ಯಾವ ಉದ್ದೇಶವೂ ನನಗಿಲ್ಲ ಎಂದು ಸುಮಲತಾ ಅಂಬರೀಷ್ ಹೇಳಿದರು.

ತಾಲೂಕಿನ ಕೆ.ಬೆಟ್ಟಹಳ್ಳಿ ಹಾಗೂ ಎಲೆಕೆರೆ ಹ್ಯಾಂಡ್‌ಪೋಸ್ಟ್ ವೃತ್ತಗಳಲ್ಲಿ ಜನರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಂಬರೀಷ್ ಏನೆಂಬುದು ನಿಮಗೆ ಗೊತ್ತಿದೆ. ಅವರು ಮೃತಪಟ್ಟಿಲ್ಲ, ನಿಮ್ಮ ನಡುವೆ ಇನ್ನೂ ಜೀವಂತವಾಗಿದ್ದಾರೆ. ಅವರ ಮೇಲಿನ ನಿಮ್ಮ ಋಣ ತೀರಿಸುವ ಉದ್ದೇಶದಿಂದ ಮಂಡ್ಯದಿಂದಲೇ ಸ್ಪರ್ಧಿಸಬೇಕೆಂದಿದ್ದೇನೆ. ನೀವು ಬಯಸುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದರು.

ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನು ನಿಮಗೆ ಬಿಟ್ಟಿದ್ದೇನೆ. ನೀವು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಜಿಲ್ಲಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಸಹಾಯ ಕೇಳಿರುವ ಜತೆಗೆ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇನೆ ಎಂದವರು ಹೇಳಿದರು.
ಸುಮಲತಾರನ್ನು ನೋಡಲು ನೂಕುನುಗ್ಗಲು ಉಂಟಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಕ್ಕೇರಿ ಸುರೇಶ್, ಕೆಪಿಸಿಸಿ ಸದಸ್ಯ ಎಲ್.ಡಿ.ರವಿ, ಮುಖಂಡರಾದ ಮತ್ತಿಘಟ್ಟ ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್, ವಿವೇಕಾನಂದ, ಎಂ.ಬಿ.ಶ್ರೀಕಾಂತ್ ಮೊದಲಾದವರಿದ್ದರು.

ಇದಕ್ಕೂ ಮುನ್ನ ಮಾಜಿ ಶಾಸಕ ಕೆ.ಕೆಂಪೇಗೌಡರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಆಶೀರ್ವದಿಸುವಂತೆ ಮನವಿ ಮಾಡಿದರು.