ಆರು ಜನರಿಗೆ ಜೈಲು ಶಿಕ್ಷೆ

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಹಿನ್ನೆಲೆ

ಪಾಂಡವಪುರ: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯ ನೀಡಿದೆ.
ತಾಲೂಕಿನ ಡಿಂಕಾ ಗ್ರಾಮದ ನಿವಾಸಿಗಳಾದ ಚೆಲುವ, ಸುನೀಲ್, ಅಶೋಕ್, ಸುಧಾಕರ, ಚಲುವಯ್ಯ ಮತ್ತು ಶ್ರೀನಿವಾಸ್ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು.
ಜನವರಿ 2, 2017 ರಂದು ಗ್ರಾಮದಲ್ಲಿ ಆಯೋಜಿಸಿದ್ದ ನಾಟಕದ ಬಂದೋಬಸ್ತ್‌ಗಾಗಿ ನೇಮಕಗೊಂಡಿದ್ದ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಮಂಜುನಾಥ್ ಮತ್ತು ಮಂಜೇಗೌಡ ಎಂಬುವ ಪೇದೆಗಳೊಂದಿಗೆ ಆರೋಪಿಗಳು ತಡರಾತ್ರಿಯಲ್ಲಿ ಜಗಳ ತೆಗೆದು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳನ್ನಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಠಾಣೆಯ ಪೊಲೀಸರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಕೆ.ರವಿಕಾಂತ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 8 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ಹಲ್ಲೆಗೊಳಗಾದ ಪೇದೆಗಳಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಪರಿಹಾರ ನೀಡಲು ವಿಫಲವಾದರೆ 3 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೊಜಕ ಎಸ್.ಶಿವಕುಮಾರ್ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *