ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರ

ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ
ಲಕ್ಷ್ಮೀದೇವಿ ಜಾತ್ರೋತ್ಸವ ಕಾರ್ಯಕ್ರಮ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಅರಳಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಜಾಗಟೆಮಲ್ಲೆನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರೋತ್ಸವ ಕಾರ್ಯಕ್ರಮ ಹಾಗೂ 4 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅರಳಕುಪ್ಪೆ ಪಂಚಾಯಿತಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಶೇಷ ಪ್ರೀತಿ ಇರುವುದರಿಂದಲೇ ಈ ಭಾಗದಲ್ಲೇ ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡಿದರು. ಅಲ್ಲದೆ, ಅರಳಕುಪ್ಪೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬಹುಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೂ ಹಣ ಬಿಡುಗಡೆಗೊಳಿಸಿದ್ದು, ಕಾಮಗಾರಿಗೆ ಶೀಘ್ರದಲ್ಲಿ ಸಿಎಂ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ನ.23ರಿಂದ 25ರವರೆಗೆ ಕೆರೆತೊಣ್ಣೂರಿನಲ್ಲಿ ಆಯೋಜಿಸಿರುವ ರಾಮಾನುಜಚಾರ್ಯರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸಲಿದ್ದು, ತುಂಬಿ ತುಳುಕುತ್ತಿರುವ ಕೆರೆತೊಣ್ಣೂರು ಕೆರೆಗೆ ಅಂದು ಮುಖ್ಯಮಂತ್ರಿ ಬಾಗಿನ ಅರ್ಪಿಸಲಿದ್ದಾರೆ. ಅಂದೇ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದು ಹೇಳಿದರು.
ಭತ್ತ ಕಟಾವಿಗೆ ಎಚ್‌ಡಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹಿಂದೆ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಾಟಿ ಮಾಡಿದ ಭತ್ತ ಕಟಾವಿನ ಹಂತ ತಲುಪಿದ್ದು, ಭತ್ತ ಕಟಾವಿಗೂ ಆಗಮಿಸುವ ನಿರೀಕ್ಷೆ ಇದೆ. ಅವರು ನಾಟಿ ಮಾಡಿದ ಪೈರು ಬೆಳೆದು ನಿಂತಿದ್ದು, ಕಾರ್ಯಕ್ರಮಗಳ ಒತ್ತಡ ಇಲ್ಲದಿದ್ದರೆ ಭತ್ತ ಕಟಾವಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಪುಟ್ಟರಾಜು ತಿಳಿಸಿದರು.
ಅರಳಕುಪ್ಪೆ ಗ್ರಾಪಂ ಅಧ್ಯಕ್ಷ ಮಹದೇವು, ಸದಸ್ಯ ಧನಂಜಯ, ಶ್ಯಾದನಹಳ್ಳಿ ಚೆಲುವರಾಜು, ಜಿಪಂ ಸದಸ್ಯೆ ಅನುಸೂಯ ದೇವರಾಜು, ಶಾಂತಲಾ ರಾಮಕೃಷ್ಣ, ತಾಪಂ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್ ಇತರರು ಇದ್ದರು.