ಸಚಿವರ ಹುಟ್ಟುಹಬ್ಬ ಆಚರಣೆಗಾಗಿ ಕಾಯ್ದ ಅಧಿಕಾರಿಗಳು!

 ಕಾರ್ಯಕ್ರಮ ಮುಗಿದ ನಂತರಷ್ಟೇ ಫ್ಲೆಕ್ಸ್‌ಗಳ ತೆರವು
ಪಾಂಡವಪುರ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪಟ್ಟಣದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಚುನಾವಣಾ ನೀತಿ ಸಂಹಿತೆ ಜಾರಿಗೊಂಡು ಎರಡು ದಿನ ಕಳೆದ ನಂತರವಷ್ಟೇ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸಿದ್ದು, ಆ ಕ್ಷಣದಿಂದಲೇ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲದೆ, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಭಾನುವಾರ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ಕುರಿತು ವಿರೋಧ ಪಕ್ಷಗಳ ಮುಖಂಡರಿಂದಲೂ ಸಾಕಷ್ಟು ಆರೋಪ ಕೇಳಿಬಂದಿತ್ತು.
ಇಷ್ಟಾದರೂ ಕ್ರಮ ಕೈಗೊಳ್ಳದಿದ್ದ ಅಧಿಕಾರಿಗಳು, ಸೋಮವಾರ ಸಚಿವರ ಹುಟ್ಟುಹಬ್ಬ ಆಚರಣೆ ಮುಗಿದ ನಂತರವಷ್ಟೇ ಕಾರ್ಯಾಚರಣೆಗೆ ಇಳಿದು, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಯಿತು. ಸಚಿವರ ಆದೇಶದಂತೆ ಕಾರ್ಯ ನಿರ್ವಹಿಸುತ್ತಿರುವ ಪುರಸಭೆ ಅಧಿಕಾರಿಗಳಿಗೆ ಸಂವಿಧಾನ, ಕಾನೂನು ಪಾಲನೆ ಮತ್ತು ಜಿಲ್ಲಾಧಿಕಾರಿ ಆದೇಶ ಮುಖ್ಯವಲ್ಲ ಎಂಬ ಟೀಕೆಗಳು ಕೇಳಿಬಂದವು.