ಉಪವಿಭಾಗಾಧಿಕಾರಿ ವಿರುದ್ಧ ರೈತರು, ಸಾರ್ವಜನಿಕರ ಆಕ್ರೋಶ

ಪಾಂಡವಪುರ: ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರು ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದೆ ಇಷ್ಟಬಂದ ಹಾಗೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ತಾಲೂಕಿನ ರೈತರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತರು ಮತ್ತು ಸಾರ್ವಜನಿಕರ ಕೆಲಸಗಳನ್ನು ಉಪವಿಭಾಗಾಧಿಕಾರಿಗಳು ನಿಗಧಿತ ಸಮಯದಲ್ಲಿ ಪರಿಹರಿಸಿಕೊಡಬೇಕು ಎಂದು ಒತ್ತಾಯಿಸಿದರು. ಉಪವಿಭಾಗಾಧಿಕಾರಿಗಳು ಪಾಂಡವಪುರ ತಾಲೂಕು ಹೊರತುಪಡಿಸಿ ಉಪವಿಭಾಗದ ಇತರೆ ತಾಲೂಕುಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರು ಮತ್ತು ಸಾರ್ವಜನಿಕರ ಭೇಟಿಗೆ ಸಮಯ ನಿಗದಿಪಡಿಸಿಲ್ಲ. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ರೈತರ ಪ್ರಕರಣಗಳನ್ನು ಇತ್ಯರ್ಥಪಡಿಸದೆ ವಿನಃ ಕಾರಣ ಸತಾಯಿಸುತ್ತಿದ್ದಾರೆ. ಕಂದಾಯ ಇಲಾಖೆಯ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಲು ಸಾರ್ವಜನಿಕರನ್ನು ವರ್ಷಾನುಗಟ್ಟಲೇ ಕಚೇರಿಗೆ ಅಲೆದಾಡಿಸಲಾಗುತ್ತಿದ್ದಾರೆೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹಿಂಬಾಲಕರು ಮತ್ತು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರ ಜತೆ ಕಚೇರಿಯ ಅಧಿಕಾರಿಗಳು ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರಕ್ಕೆ ಮುಂದಾಗದಿದ್ದರೆ ಸಾರ್ವಜನಿಕರು, ರೈತರೊಡಗೂಡಿ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಸಿದರು. ಉಪವಿಭಾಗಾಧಿಕಾರಿ ಶೈಲಜಾ ಅವರೇ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ತನಗೆ ವೀಡಿಯೋ ಕಾನ್ಫರೆನ್ಸ್ ಇದೆ ಎಂದು ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೆ ಹೋದರು.

ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ವೆಂಕಟೇಶ್, ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಮರೀಗೌಡ, ಯೋಗೇಶ, ರವಿ ಪಾನಿಪೂರಿ, ಲೋಕೇಶ್, ಶಿವಕುಮಾರ್‌ಗೌಡ ಇತರರು ಇದ್ದರು.

Leave a Reply

Your email address will not be published. Required fields are marked *