ತಾಲೂಕು ಕಚೇರಿಗೆ ರೈತರ ಮುತ್ತಿಗೆ

ಪಾಂಡವಪುರ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಲು ಸಂಪೂರ್ಣ ವಿಫಲವಾಗಿದ್ದು, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪದ ಬಳಿ ಜಮಾವಣೆಗೊಂಡ ರೈತಸಂಘ ಕಾರ್ಯಕರ್ತರು ಸಮ್ಮಿಶ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಗ್ಗಿ ಮುಗಿಯುತ್ತಾ ಬಂದರೂ ಭತ್ತ ಖರೀದಿ ಕೇಂದ್ರ ತೆರೆದಿಲ್ಲ, ರೈತರು ಭತ್ತವನ್ನು ಬಿಡುಗಾಸಿಗೆ ದಲ್ಲಾಳಿಗಳಿಗೆ ಮಾರುವಂತಾಗಿದೆ. ತಕ್ಷಣ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಹಾಲಿಗೆ 2ರೂ. ದರ ಕಡಿತ ಮಾಡುವ ಮೂಲಕ ಸರ್ಕಾರ ಮತ್ತೊಂದು ಪೆಟ್ಟು ನೀಡಿದೆ. ಮೈಶುಗರ್, ಪಿಎಸ್‌ಎಸ್‌ಕೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.

ಮಂಡ್ಯ ಜಿಲ್ಲೆ ನನ್ನ ಕಣ್ಣಿದ್ದಂತೆ ಎನ್ನುವ ಕುಮಾರಸ್ವಾಮಿ ರೈತರಿಗೆ ಯಾವುದೇ ಪ್ರಯೋಜನವಾಗದ ಡಿಸ್ನಿಲ್ಯಾಂಡ್ ಅನ್ನು ಕೆಆರ್‌ಎಸ್‌ನಲ್ಲಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಬೇಬಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಒಳಗೊಂಡ ಮನವಿಯನ್ನು ತಹಸೀಲ್ದಾರ್ ಎಂ.ವಿ.ರೂಪಾ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕೆನ್ನಾಳು ನಾಗರಾಜು, ಎಣ್ಣೆಹೊಳೆಕೊಪ್ಪಲು ಮಂಜು, ರಾಘು, ಗೌಡೇಗೌಡ ಇತರರು ಇದ್ದರು.