ಪಾಂಡವಪುರದಲ್ಲೂ ಮಿಶ್ರ ಪ್ರತಿಕ್ರಿಯೆ

ಪಾಂಡವಪುರ : ಭಾರತ್ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವ್ಯವಹಾರ ನಡೆಸಿದರೆ, ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿದರೆ ಖಾಸಗಿ ವಾಹನಗಳು, ಆಟೋ ರಿಕ್ಷಾಗಳು, ಸರ್ಕಾರಿ ಕಚೇರಿ, ಸಿನಿಮಾ ಮಂದಿರ, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಬಂದ್ ಬೆಂಬಲಿಸಿ ಪ್ರತಿಭಟನೆ: ಬಂದ್ ಬೆಂಬಲಿಸಿ ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ರೈತಸಂಘದ ಕಾರ್ಯಕರ್ತರು ಕೆಲಕಾಲ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಡಾ.ರಾಜ್‌ಕುಮಾರ್ ವೃತ್ತದ ಬಳಿ ಜಮಾವಣೆಗೊಂಡು ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಐದು ದೀಪದ ವೃತ್ತದ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ವಾಹನಗಳಿಗೆ ಬೇಡಿಕೆ: ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ರಸ್ತೆಗಿಳಿಯದ ಕಾರಣ ಖಾಸಗಿ ವಾಹನಗಳು ಮತ್ತು ಆಟೋಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಪಟ್ಟಣದಿಂದ ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮಂಡ್ಯ ಸೇರಿದಂತೆ ಇತರೆಡೆಗೆ ಸಂಚರಿಸುವ ಪ್ರಯಾಣಿಕರು ಪರದಾಡುವುದರ ಜತೆಗೆ, ಖಾಸಗಿ ವಾಹನಗಳ ಮಾಲೀಕರು ಕೇಳಿದ ದರ ನೀಡಿ ಪ್ರಯಾಣ ಬೆಳೆಸಿದರು.

ಬಲವಂತದ ಬಂದ್‌ಗೆ ಆಕ್ರೋಶ: ಪ್ರತಿಭಟನೆ ನಡೆಸಿದ ವಿವಿಧ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಮೆರವಣಿಗೆ ನಡೆಸಿ ಬಂದ್ ಮಾಡಲು ಅಂಗಡಿ ಮಾಲೀಕರಿಗೆ ಬಲವಂತ ಮಾಡಿದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಬಲವಂತದ ಬಂದ್‌ಗೆ ಅವಕಾಶವಿಲ್ಲದಿದ್ದರೂ ಬಂದ್ ಮಾಡಲು ಒತ್ತಾಯಿಸಿದ್ದು ಮತ್ತು ಈ ವೇಳೆ ಪೊಲೀಸರು ನೋಡಿಯೂ ನೋಡದಂತಿದ್ದರಿಂದ ಸಾರ್ವಜನಿಕರು ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಕರವೇ ಅಧ್ಯಕ್ಷ ಗೋವಿಂದರಾಜು, ತಾಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾರತಿ, ತಾಲೂಕು ಅಧ್ಯಕ್ಷೆ ಸೌಭಾಗ್ಯ, ಆಟೋ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಕಿಸಾನ್ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷ ಕುಬೇರ, ದೇವರಾಜು, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಉಮಾಶಂಕರ್, ಎಂ.ಜಯಲಕ್ಷ್ಮೀ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *