ಬೇಬಿ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಆರಂಭ

ಪಾಂಡವಪುರ: ತಾಲೂಕಿನ ಪ್ರಸಿದ್ಧ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವ, ವಸ್ತುಪ್ರದರ್ಶನ ಸೋಮವಾರ ಆರಂಭವಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ದನಗಳ ಜಾತ್ರಾ ಮಹೋತ್ಸವ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಿರುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಜಾತ್ರೆ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದಲ್ಲಿ ವಿಶೇಷ ದೀಪಾಲಂಕಾರ, ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಂಡಿರುವ ಜನ-ಜಾನುವಾರುಗಳಿಗೆ ಉಚಿತ ಕುಡಿಯುವ ನೀರು, ಆರೋಗ್ಯ ತಪಾಸಣೆ, ಮೇವು ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಮಾ.10ರಂದು ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ತಿರುಪತಿ ಅರ್ಚಕರಿಂದ ಇದೇ ಮೊದಲ ಬಾರಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 10 ಸಾವಿರ ತಿರುಪತಿ ಲಡ್ಡು ವಿತರಣೆ ಮಾಡಲಾಗುತ್ತದೆ. ಮಾ.11ರಂದು ಸಿದ್ದೇಶ್ವರ ಹಾಗೂ ಮಹದೇಶ್ವರ ರಥೋತ್ಸವ, ಮಾ.12ರಂದು ತೆಪ್ಪೋತ್ಸವ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಬೇಬಿ ಬೆಟ್ಟದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಜಿಪಂ ಸದಸ್ಯರಾದ ಸಿ.ಅಶೋಕ್, ಅನುಸೂಯ, ತಾಪಂ ಸದಸ್ಯರಾದ ಗಾಯತ್ರಿ, ಪೂರ್ಣಿಮಾ, ಚಿನಕುರಳಿ ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ, ಸದಸ್ಯರಾದ ಸಿ.ಶಿವಕುಮಾರ್, ಮಹದೇವು, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಇಒ ಆರ್.ಪಿ.ಮಹೇಶ್ ವಿವಿಧ ಇಲಾಖಾಧಿಕಾರಿಗಳಿದ್ದರು.

ಭಾರಿ ದನಗಳ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ರೈತರು ತಮ್ಮ ರಾಸುಗಳನ್ನು ಕರೆತಂದಿದ್ದು, ಜಾತ್ರಾ ಮಹೋತ್ಸವ ಕಳೆಗಟ್ಟಿದೆ.