ಅಂಗನವಾಡಿ ಅವ್ಯವಸ್ಥೆ ಕಂಡು ತಾರಾ ಮರುಕ

ಪಾಂಡವಪುರ: ಅಂಗನವಾಡಿ ಸ್ಥಿತಿ ಕಂಡು ಮರುಗಿದ ಹಿರಿಯ ಚಿತ್ರನಟಿ ತಾರಾ ಅವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಕರೆಮಾಡಿ ಮನವಿ ಮಾಡಿದರು.

ಇತ್ತೀಚೆಗೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಧ್ರುವಸರ್ಜಾ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿಂಗ ಚಿತ್ರದಲ್ಲಿ ಅಭಿನಯಿಸಲು ತಾರಾ ಆಗಮಿಸಿದ್ದರು. ವಿಶ್ರಾಂತಿ ವೇಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

ಅಂಗನವಾಡಿಯಲ್ಲಿನ ಅವ್ಯವಸ್ಥೆಗಳು, ಮೂಲಸೌಕರ್ಯಗಳ ಕೊರತೆ ಕಂಡು ಆತಂಕವ್ಯಕ್ತಪಡಿಸಿದರಲ್ಲದೆ, ಅಂಗನವಾಡಿ ಕೇಂದ್ರದಲ್ಲಿ ವಿದ್ಯುತ್ ಮತ್ತು ಶೌಚಗೃಹ ಇಲ್ಲದಿರುವುದು ಸೇರಿ ಇತರೆ ಸಮಸ್ಯೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಅವರಿಂದ ಮಾಹಿತಿ ಪಡೆದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮೊಬೈಲ್‌ಗೆ ಕರೆ ಮಾಡಿ ವಾಸ್ತವ ಸ್ಥಿತಿ ವಿವರಿಸಿ, ತಕ್ಷಣ ಅಂಗನವಾಡಿ ಕೇಂದ್ರಕ್ಕೆ ಬೇಕಾಗಿರುವ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಅದಕ್ಕೆ ಸಚಿವರು ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ನಂತರ ಅಂಗನವಾಡಿ ಮಕ್ಕಳೊಡನೆ ಕೆಲಕಾಲ ಕಳೆದು ಅಲ್ಲಿಂದ ತೆರಳಿದರು. ಗ್ರಾಪಂ ಉಪಾಧ್ಯಕ್ಷ ಸುರೇಶ್‌ರಾವ್, ದೊಡ್ಡಿಘಟ್ಟ ಸುರೇಶ್,ಗ್ರಾಮಸ್ಥ ಧನಂಜಯ ಮತ್ತತರರು ಈ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *