ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವುದು ಹಾಗೂ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಲು ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ಸರ್ಕಾರಿ ಲಾಠಿ ಚಾರ್ಜ್ ಮಾಡಿಸಿರುವುದನ್ನು ಖಂಡಿಸಿ ಶುಕ್ರವಾರ ವಿವಿಧ ಸಮುದಾಯದವರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯುದ್ದಕ್ಕೂ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಪಂಚಮಸಾಲಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಸರ್ವಾಧಿಕಾರಿ ಧೋರಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಿಕ್ಕಾರ ಮೊಳಗಿಸಲಾಯಿತು.
ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಮಾಜದ ಬಡ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಯ ಅಗತ್ಯವಿದೆ. ಅದನ್ನು ಪಡೆದುಕೊಳ್ಳಲು ಸರ್ಕಾರದ ಗಮನಸೆಳೆಯಲು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಏಕಾಏಕಿ ವೃದ್ಧರು ಎನ್ನದೆ ಎಲ್ಲರ ಮೇಲೆಯೂ ಲಾಠಿ ಪ್ರಹಾರ ಮಾಡಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ನಡೆ ಖಂಡನೀಯ. ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸೇರಿದಾಗಲೂ ಶಾಂತ ರೀತಿಯಲ್ಲಿ ಹೋರಾಟ ಮಾಡಿದ ಸಮಾಜ ನಮ್ಮದು. ಈ ಹೋರಾಟ ಹತ್ತಿಕ್ಕುವ ಹುನ್ನಾರದಿಂದಲೇ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಏನೇ ಮಾಡಿದರೂ ನಮ್ಮ ಸಮಾಜದ ಬಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೀಸಲಾತಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ರುದ್ರಗೌಡರ ಮಾತನಾಡಿ, ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತವಾಗಿ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ. ಎಂದೂ ಶಾಂತಿ ಕದಡಲು ಯತ್ನಿಸಿಲ್ಲ. ಆದರೆ, ಬೆಳಗಾವಿಯಲ್ಲಿ ಹೋರಾಟದ ದಿಕ್ಕು ತಪ್ಪಿಸಲೆಂದೇ, ಕಾಂಗ್ರೆಸ್ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ಪಂಚಮಸಾಲಿ ರಾಜ್ಯ ವಕೀಲರ ಪರಿಷತ್ ಸದಸ್ಯ ಶ್ರೀಶೈಲ ಮುಳಜಿ ಮಾತನಾಡಿದರು.
ಪಂಚಮಸಾಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣಿ, ಪಂಚಸೈನ್ಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೊಳಕೂರ, ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಅನೀಲ ಪಾಟೀಲ, ವಿಶ್ವನಾಥ ಸಾರವಾಡ, ನಿತೀಶ ಬಿರಾದಾರ, ಕಿರಣ ಉಳ್ಳಾಗಡ್ಡಿ, ಶಂಕರಗೌಡ ಹೊನಗನಹಳ್ಳಿ, ಸಾಹೇಬಗೌಡ ಬಿರಾದಾರ, ಸಿದ್ದು ಬಿರಾದಾರ, ದಾನೇಶ ಅವಟಿ ಮತ್ತಿತರರಿದ್ದರು.