ಕಸದ ಪಟ್ಟಣವಾಗಿ ಮಾರ್ಪಾಡಾಗುತ್ತಿದೆ ಕಳಸ

ಕಳಸ: ಪಟ್ಟಣವನ್ನು ಸ್ವಚ್ಛವಾಗಿಡಲು ಕೆಲವರು ನಿರ್ಲಕ್ಷ್ಯಹಿಸಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಕಳಸ ಕಸದ ಪಟ್ಟಣವಾಗಿ ಮಾರ್ಪಾಡಾಗುತ್ತಿದೆ.

ಭದ್ರಾ ನದಿಯಲ್ಲಿ ಕೋಟಿ ತೀರ್ಥ, ವಶಿಷ್ಟ ತೀರ್ಥ, ಅಂಬಾ ತೀರ್ಥ, ನಾಗ ತೀರ್ಥ, ರುದ್ರ ತೀರ್ಥ ಎಂಬ ಹೆಸರಿನ ಪಂಚ ತೀರ್ಥಗಳಿವೆ. ಒಂದೊಂದು ತೀರ್ಥಗಳೂ ಪಾವಿತ್ರ್ಯೆ ಪಡೆದಿವೆ. ಆದರೆ ಈ ತಟಗಳಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳುಮಾಡುವ ಜತೆಗೆ ಕುಡಿಯುವ ನೀರನ್ನೂ ಮಲಿನ ಮಾಡಲಾಗುತ್ತಿದೆ.

ಕಳಸ ಸಮೀಪದ ಕೋಟೆಹೊಳೆಯ ಭದ್ರಾ ನದಿ ತಟದಲ್ಲಿ ನದಿಯ ಶ್ರೇಷ್ಠತೆ ಲೆಕ್ಕಿಸದೆ ಅಲ್ಲಿ ಪ್ಲಾಸ್ಟಿಕ್ ಕವರ್​ಗಳು, ಬಾಟಲಿಗಳು, ಹಳೇ ಮನೆ ತ್ಯಾಜ್ಯಗಳನ್ನು ತಂದು ಸುರಿಯಲಾಗಿದೆ. ಅಡುಗೆ ಮಾಡಿದ ತ್ಯಾಜ್ಯವನ್ನೂ ತಂದು ಇದೇ ನದಿಗೆ ಎಸೆಯಲಾಗುತ್ತಿದೆ. ಸಮಾರಂಭಗಳಲ್ಲಿ ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ನದಿ ತಟಕ್ಕೆ ತಂದು ಸುರಿಯಲಾಗುತ್ತಿದೆ. ಮಳೆ ಬಂದಾಗ ಇದೇ ತ್ಯಾಜ್ಯ ನದಿ ಒಡಲನ್ನು ಸೇರುತ್ತದೆ.

ಪ್ರವಾಸಿಗರಿಂದಲೂ ಕಲುಷಿತ: ಭದ್ರಾ ನದಿಯ ವಶಿಷ್ಟ ತೀರ್ಥ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಳವಾಗಿದೆ. ಇಲ್ಲಿನ ತೂಗು ಸೇತುವೆ ಕಣ್ಮನ ಸೆಳೆಯುತ್ತದೆ. ಇದನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ತೂಗು ಸೇತುವೆ ಅಂದಚೆಂದ ನದಿಗೆ ಮಾರಕವಾಗಿದೆ. ಬಂದ ಪ್ರವಾಸಿಗರು ಹಾಗೂ ಸ್ಥಳೀಯರು ಇದನ್ನೇ ಮದ್ಯಪಾನ ಮಾಡುವ ಸ್ಥಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕುಡಿದ ಬಾಟಲಿಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದು ಇಲ್ಲಿನ ಪಾವಿತ್ರ್ಯ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ.

ಕಾಲೇಜು ವಿದ್ಯಾರ್ಥಿಗಳ ಶ್ರಮ ವ್ಯರ್ಥ: ಹೊರನಾಡಿಗೆ ಹೋಗುವ ಭಕ್ತಾದಿಗಳು ಹೆಬ್ಬಾಳೆ ಸೇತುವೆ ದಾಟಿ ಹೋಗಬೇಕು. ಪ್ರವಾಸಿಗರು ಈ ನದಿಯಲ್ಲಿ ಸ್ನಾನ ಮಾಡುವ ಜತೆಗೆ ವಾಹನಗಳನ್ನು ನದಿಗೆ ಇಳಿಸಿ ತೊಳೆಯುತ್ತಾರೆ. ವಾಹನ ತ್ಯಾಜ್ಯವನ್ನು ನದಿಗೆ ಎಸೆಯುತ್ತಾರೆ. ಪ್ರವಾಸಿಗರೂ ನದಿ ತಟದಲ್ಲೇ ಮಲಮೂತ್ರ ವಿಸರ್ಜಿಸುತ್ತಿದ್ದಾರೆ. ಒಂದೆರಡು ವಾರದ ಹಿಂದೆ ಕಳಸ ಪ್ರಥಮದರ್ಜೆ ಕಾಲೇಜಿನ ಎನ್​ಎಸ್​ಎಸ್ ಶಿಬಿರದ ವಿದ್ಯಾರ್ಥಿಗಳು ಈ ನದಿಯ ತಟ ಸ್ವಚ್ಛಗೊಳಿಸಿದ್ದರು. ಇದೀಗ ಮತ್ತೆ ಯಥಾಸ್ಥಿತಿ ಕಾಣುತ್ತಿದೆ.

ಕುಡಿಯುವ ನೀರು ಕಲುಷಿತ: ಭದ್ರಾ ನದಿ ನೀರನ್ನು ಆಶ್ರಯಿಸಿ ಲಕ್ಷಾಂತರ ಜನ ಬದುಕುತ್ತಿದ್ದಾರೆ. ಈ ನದಿ ತಟದ ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಆದರೆ ನದಿ ಮೂಲದಲ್ಲೇ ನೀರು ಕಲುಷಿತಗೊಳ್ಳುತ್ತಿದೆ. ಇಲ್ಲಿನ ಗ್ರಾಪಂ ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಇದಕ್ಕಾಗಿ ಟಿಪ್ಪರ್ ಖರೀದಿಸಿ ನಿತ್ಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿದೆ. ತ್ಯಾಜ್ಯ ವಿಲೇವಾರಿಗೂ ಪ್ರತ್ಯೇಕ ಸ್ಥಳ ನಿಗದಿಪಡಿಸಿದೆ. ಸ್ವಚ್ಛತೆಗೆ ಲಕ್ಷಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ. ಆದರೆ ಪ್ರವಾಸಿಗರ ಜತೆ ಸ್ಥಳೀಯರೂ ತ್ಯಾಜ್ಯವನ್ನು ನದಿಗೆ ಸುರಿಯುತ್ತಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *