ಪಂಚಪೀಠಗಳು ರಾಜಕೀಯದಿಂದ ದೂರ

ಬಾಳೆಹೊನ್ನೂರು: ಮಾನವ ಧರ್ಮಕ್ಕೆ ಜಯವಾಗಲಿ. ಸರ್ವರಿಗೂ ಶಾಂತಿ-ಸಮೃದ್ಧಿ ಸಿಗಲಿ ಎಂಬ ಉದ್ದೇಶ ಹೊಂದಿರುವ ವೀರಶೈವ ಧರ್ಮದ ಪಂಚಪೀಠಗಳು ರಾಜಕೀಯದಿಂದ ದೂರ ಉಳಿದಿವೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಶ್ರೀರಂಭಾಪುರಿ ಪೀಠದಲ್ಲಿ ಪೌರ್ಣಿಮಾ ಧರ್ಮ ಸಮಾರಂಭದಲ್ಲಿ ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿ, ಪರಂಪರೆ, ಆದರ್ಶಗಳನ್ನು ಪಂಚಪೀಠಗಳು ಬೆಳೆಸಿಕೊಂಡು ಬಂದಿವೆ. ಎಲ್ಲ ಸಮುದಾಯಕ್ಕೂ ಅನ್ವಯಿಸುವ ಸಮನ್ವಯ ಸಂದೇಶಗಳನ್ನು ನೀಡುತ್ತಿದೆ. ಆಧುನಿಕತೆ, ವೈಚಾರಿಕತೆ ಹೆಸರಲ್ಲಿ ಕೆಲವರು ಧರ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಸಂಸ್ಕೃತಿ, ಸೌಹಾರ್ದತೆ ಬೆಳೆಸಬೇಕಾದ ಕೆಲ ಮಠಾಧೀಶರು, ಸಾಹಿತಿಗಳು ನಾಸ್ತಿಕ ಪ್ರವೃತ್ತಿ ಬೆಳೆಸಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ಪಂಚಪೀಠಗಳು ಯಾವುದೇ ಪಕ್ಷ, ವ್ಯಕ್ತಿ ಪರವಾಗಿರದೆ ಸಮಷ್ಟಿ ಪ್ರಜ್ಞೆ ಬೆಳೆಸುತ್ತಿದೆ. ವೀರಶೈವ ಧರ್ಮದಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಸಂಘರ್ಷ ನಡೆದಿರಬಹುದು. ಬಹು ಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ಒಡೆದಾಳುವ ನೀತಿಗೆ ಕೆಲವರು ಯತ್ನಿಸುತ್ತಿರುವುದು ಖಂಡನೀಯ ಎಂದರು.

ವೀರಶೈವ ಧರ್ಮ ಪಂಚಪೀಠಗಳು ನಾಡಿನ ಬಹಳಷ್ಟು ವಿರಕ್ತ ಮಠಾಧೀಶರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಒಂದೇ ಎಂಬುದನ್ನು ಸ್ಪಷ್ಟಪಡಿಸಿವೆ. ಯಾವುದೇ ಧರ್ಮ ಆಯಾ ಗುರುಪೀಠಗಳ ಉತ್ಕೃಷ್ಠ ಆದರ್ಶಗಳನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ರಾಜಕಾರಣಿಗಳು ಜ್ವಲಂತ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ಕಾರ್ಯಗಳ ಕಡೆಗೆ ಹೆಚ್ಚು ಗಮನ ನೀಡಬೇಕೆ ಹೊರತು ಧರ್ಮ ಸಂಸ್ಕೃತಿಗಳನ್ನು ಕಲುಷಿತಗೊಳಿಸಬಾರದು ಎಂದರು.

ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆಗೊಳಿಸಿದರು. ಚಿಕ್ಕಮಗಳೂರಿನ ಉಪ್ಪಳ್ಳಿ ಬಸವರಾಜ್, ಓಂಕಾರಸ್ವಾಮಿ, ಟಿ.ಕೆ. ಲೋಕೇಶ, ದೇವರಾಜ್, ಎ.ಎಂ. ರೇಣುಕಾರ್ಯ, ಪ್ರವೀಣ ಖಾಂಡ್ಯ ಉಪಸ್ಥಿತರಿದ್ದರು.

ರಾಜಕೀಯದಲ್ಲಿ ಧರ್ಮವಿರಲಿ ಆದರೆ ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಧರ್ಮ ನಾಶ ಮಾಡುವ ಶಕ್ತಿ ಯಾರಿಗೂ ಇಲ್ಲ. ಹಾಗೆ ನಾಶಕ್ಕೆ ಮುಂದಾದರೆ ನಾಡಿನ ಜನರು ತಮ್ಮ ನಿರ್ಧಾರ ಕೈಗೊಳ್ಳುವುದು ಶತಃಸಿದ್ಧ. ಪಂಚಪೀಠಗಳ ಮತ್ತು ಪೀಠಗಳ ಭಕ್ತರ ಸಹನೆ ತಾಳ್ಮೆಯನ್ನು ದೌರ್ಬಲ್ಯವೆಂದು ತಿಳಿಯಬಾರದು.

| ರಂಭಾಪುರಿ ಶ್ರೀಗಳು

Leave a Reply

Your email address will not be published. Required fields are marked *