ಕಡೂರಲ್ಲಿ ಒಬ್ಬೊಬ್ಬರೇ ನಿರ್ವಹಿಸಬೇಕು ಮೂರು ಹುದ್ದೆ

ಪಂಚನಹಳ್ಳಿ: ಕಡೂರು ತಾಲೂಕಿನ ನಾಡ ಕಚೇರಿಗಳಲ್ಲಿ ಸಿಬ್ಬಂದಿಗೆ ಬರ. ಇದರ ಪರಿಣಾಮ ಜನರ ಮೇಲೆ ಬೀರುತ್ತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳು ಸಿಗದೆ ಮಧ್ಯವರ್ತಿಗಳ ಮೊರೆಹೋಗಿ ಹಣ ಕಳೆದುಕೊಳ್ಳುವಂತಾಗಿದೆ.

ಯಗಟಿ, ಸಿಂಗಟಗೆರೆ ಮತ್ತು ಪಂಚನಹಳ್ಳಿ ನಾಡ ಕಚೇರಿಗಳಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ದಾಖಲೆಗಳು ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ರೈತರು ನಾಡ ಕಚೇರಿಗೆ ನಿತ್ಯ ಅಲೆದು ಸುಸ್ತಾಗುತ್ತಾರೆ. ಕೊನೆಗೆ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ.

ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕ, ಪ್ರತಿ ವೃತ್ತಕ್ಕೆ ಒಬ್ಬರಂತೆ ಗ್ರಾಮ ಲೆಕ್ಕಾಧಿಕಾರಿ, ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಒಬ್ಬ ಕೇಸ್ ವರ್ಕರ್, ಕಂಪ್ಯೂಟರ್ ಆಪರೇಟರ್, ಡಿ ದರ್ಜೆ ನೌಕರ ಸೇರಿ ಹತ್ತಕ್ಕೂ ಹೆಚ್ಚು ಹುದ್ದೆಗಳಿರುತ್ತವೆ. ಆದರೆ ಪಂಚನಹಳ್ಳಿಯಲ್ಲಿ ರಾಜಸ್ವ ನಿರೀಕ್ಷಕರೇ ಉಪ ತಹಸೀಲ್ದಾರ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿ ಕಾಯಂ ಗ್ರಾಮಲೆಕ್ಕಾಧಿಕಾರಿಯಿಲ್ಲ.ನಿಯೋಜನೆ ಮೇಲೆ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಪಂಚನಹಳ್ಳಿ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಿಂಗಟಗೆರೆ ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಒಬ್ಬರೇ ಮೂರು ವೃತ್ತಗಳ ಜತೆಗೆ ಕಂದಾಯ ನಿರೀಕ್ಷಕರಾಗಿಯೂ ಕೆಲಸ ಮಾಡಬೇಕಿದೆ. ಈ ಮೂರೂ ನಾಡ ಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡು ಮೂರು ವೃತ್ತಗಳನ್ನು ನಿಭಾಯಿಸಬೇಕಿದೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಸರಿಯಾದ ಸಮಯಕ್ಕೆ ಜನರನ್ನು ತಲುಪುತ್ತಿಲ್ಲ.

ಹೊಸದಾಗಿ ಸಿಬ್ಬಂದಿ ನೇಮಕ ಮಾಡಬೇಕು ಮತ್ತು ನಾಡ ಕಚೇರಿಗಳಿಂದ ನಿಯೋಜನೆ ಮೇಲೆ ಹಿರಿಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೂಡಲೆ ಬಿಡುಗಡೆ ಮಾಡಿ ಅವರ ಮೂಲ ಸ್ಥಾನಗಳಿಗೆ ಕಳುಹಿಸಬೇಕಿದೆ.

ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ದಾಖಲಾತಿ: ಜನನ ಮತ್ತು ಮರಣ ಪ್ರಮಾಣ ಪತ್ರದಿಂದ ಹಿಡಿದು ಸುಮಾರು 30 ದಾಖಲೆಗಳನ್ನು ರೈತರು ನಾಡ ಕಚೇರಿಯಿಂದ ಪಡೆಯಬೇಕಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಪ್ರಮಾಣ ಪತ್ರಗಳು ನಿಗದಿತ ಸಮಯಕ್ಕೆ ಸಿಗುವುದಿಲ್ಲ. ಸಕಾಲ ಯೋಜನೆಯೂ ಸಿಬ್ಬಂದಿ ಕೊರತೆಯಿಂದ ಅಕಾಲವಾಗಿದೆ. ಒಬ್ಬನೇ ಕಂಪ್ಯೂಟರ್ ಆಪರೇಟರ್ ಪ್ರತಿನಿತ್ಯ ಬರುವ ನೂರಾರು ಅರ್ಜಿಗಳನ್ನು ಗಣಕೀಕರಣ ಮಾಡಬೇಕಿರುವುದರಿಂದ ಅರ್ಜಿ ಸಲ್ಲಿಸಲು ರೈತರು ಬೆಳಗ್ಗೆಯಿಂದ ಸಂಜೆವರೆಗೆ ಬಿರು ಬಿಸಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಬಸವಳಿಯುತ್ತಾರೆ. ಕುಡಿಯುವ ನೀರು ಅಥವ ಶೌಚಗೃಹದ ವ್ಯವಸ್ಥೆಯೂ ಈ ನಾಡ ಕಚೇರಿಗಳಲ್ಲಿಲ್ಲ. ನಾಡ ಕಚೇರಿಗಳಿಗೆ ಸಿಬ್ಬಂದಿ ಒದಗಿಸುವ ಮೂಲಕ ಶಕ್ತಿ ತುಂಬಬೇಕಿದ್ದ ಹಿರಿಯ ಅಧಿಕಾರಿಗಳು ನಾಡ ಕಚೇರಿಯ ಸಿಬ್ಬಂದಿಯನ್ನು ತಾಲೂಕು ಕಚೇರಿಗೆ ನಿಯೋಜನೆ ಮೇಲೆ ಕರೆಯಿಸಿಕೊಳ್ಳುತ್ತಿರುವುದರಿಂದ ನಾಡ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಮತ್ತಷ್ಟು ಹೆಚ್ಚಿದೆ.