ಇಂದಿನಿಂದ ಪಂಚಮಹಾವೈಭವ

ಧರ್ಮಸ್ಥಳ: ಬಾಹುಬಲಿಯ ಪಾವನ ಚರಿತೆ ವಿವರಿಸುವ ಪಂಚಮಹಾವೈಭವ ಎಂಬ ವಿಶಿಷ್ಟ ಐತಿಹಾಸಿಕ ಕಾರ್ಯಕ್ರಮಕ್ಕೆ ಧರ್ಮಸ್ಥಳ ಸೋಮವಾರ ಸಾಕ್ಷಿಯಾಗಲಿದೆ. ಐದು ದಿನಗಳ ಕಾಲ (11ರಿಂದ 15ರವರೆಗೆ) ಬೆಳಗ್ಗೆ-ಸಾಯಂಕಾಲ ಪ್ರದರ್ಶನಗೊಳ್ಳಲಿದೆ.

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ, ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಈ ಧಾರ್ಮಿಕ ಕಲಾವೈಭವದಲ್ಲಿ 320 ಕಲಾವಿದರು ಪಾಲ್ಗೊಳ್ಳಲಿದ್ದು, ಬಾಹುಬಲಿಯ ಬಾಲ್ಯ, ಯೌವನ, ಯುದ್ಧ, ತ್ಯಾಗ, ವೈರಾಗ್ಯಗಳನ್ನು ಅನಾವರಣಗೊಳಿಸಲಿದ್ದಾರೆ. ಮೊದಲ ದಿನ ಬೆಳಗ್ಗೆ ಶ್ರೀ ಆದಿನಾಥ ಮಹಾರಾಜರ ಆಡಳಿತದಲ್ಲಿ ನವಯುಗ ಆರಂಭದ ಸಂಕೇತಗಳು, ಆದಿನಾಥ ಮಹಾರಾಜರಿಂದ ಪ್ರಜೆಗಳಿಗೆ ಅಸಿ-ಮಸಿ-ಕೃಷಿ ಮಾರ್ಗದರ್ಶನ, ಸಾಯಂಕಾಲ ಆದಿನಾಥರ ಮಕ್ಕಳ ಬಾಲಲೀಲೋತ್ಸವ ಪ್ರದರ್ಶನಗೊಳ್ಳಲಿದೆ.

12ರಂದು ಬೆಳಗ್ಗೆ 9.30ಕ್ಕೆ ಸ್ತ್ರೀ ಶಿಕ್ಷಣ,-ಆದಿನಾಥ ಮಹಾರಾಜರಿಂದ ಬ್ರಾಹ್ಮೀ ಸುಂದರಿ, ಭರತ-ಬಾಹುಬಲಿ ಮತ್ತು ಇತರ ಮಕ್ಕಳಿಗೆ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯ ವೈಭವ ನಡೆಯಲಿದೆ. ಸಾಯಂಕಾಲ ಕೇವಲ ಜ್ಞಾನದಂತೆ ಆದಿನಾಥ ಮಹಾರಾಜರು ಭರತ- ಬಾಹುಬಲಿ, ಇತರ ಮಕ್ಕಳಿಗೆ ಅರಸೊತ್ತಿಗೆ ನೀಡಿ ಭೋಗ ಜೀವನ ತ್ಯಜಿಸಿ ತ್ಯಾಗದೆಡೆಗೆ ಸಾಗುವುದು. 13ರಂದು ಭರತನ ದಿಗ್ವಿಜಯದ ವೈಭವದ ಮೆರವಣಿಗೆ ಧರ್ಮಸ್ಥಳದಿಂದ ನೇತ್ರಾವತಿವರೆಗೆ ಅದ್ದೂರಿಯಾಗಿ ನಡೆಯಲಿದೆ. ಸಾಯಂಕಾಲ ನೇತ್ರಾವತಿಯಿಂದ ಹೊರಟು ಧರ್ಮಸ್ಥಳ ಮುಖ್ಯದ್ವಾರದ ಬಳಿ ನಿರ್ಮಿಸಲಾದ ವೃಷಭಾಚಲ ಬೆಟ್ಟಕ್ಕೆ ತಲುಪಲಿದೆ. ಅಲ್ಲಿನ ಶಿಲೆಗಳಲ್ಲಿ ಚಕ್ರವರ್ತಿಯ ಹೆಸರು ಕೆತ್ತಿದ ಬಳಿಕ ವಿಜಯಯಾತ್ರೆ ದೇವಸ್ಥಾನದ ಮಹಾದ್ವಾರಕ್ಕೆ ಬಂದು ಚಕ್ರದ ಸೂಚನೆ ಮೇರೆಗೆ ಅಲ್ಲಿಯೇ ಸ್ತಬ್ಧಗೊಳ್ಳಲಿದೆ.

14ರಂದು ಧರ್ಮಯುದ್ಧ-ತ್ಯಾಗ ವೈಭವದ ದೃಶ್ಯ ನಡೆಯಲಿದೆ. ಸಾಯಂಕಾಲ ಪೌದನಾಪುರ ನಗರದ ಹೊರಗೆ ಭರತ- ಬಾಹುಬಲಿ ಮಧ್ಯೆ ದೃಷ್ಟಿ, ಯುದ್ಧ, ಜಲ ಯುದ್ಧ ಮತ್ತು ಮಲ್ಲ ಯುದ್ಧ ನಡೆಯಲಿದೆ. 15ರಂದು ಆದಿನಾಥ ತೀರ್ಥಂಕರರ ಸಮವಸರಣ ದರ್ಶನ, ಭರತಾಗಮನ ಶಂಕೆ ನಿವಾರಣೆ. ಸಾಯಂಕಾಲ ಬಾಹುಬಲಿ ಸ್ವಾಮಿಗೆ ಕೇವಲ ಜ್ಞಾನ ಪಡೆಯುವುದು.

50 ಸಾವಿರ ಚದರ ಅಡಿಯ ಸಭಾಂಗಣ: ಅಮೃತವರ್ಷಿಣಿ ಸಭಾಂಗಣ ಹಿಂಭಾಗದಲ್ಲಿ ಪಂಚಮಹಾವೈಭವವಕ್ಕೆ ವಿಶಾಲ ಸಭಾಂಗಣ ನಿರ್ಮಾಣವಾಗಿದೆ. 50 ಸಾವಿರ ವಿಸ್ತೀರ್ಣದ ಸಭಾಂಗಣದಲ್ಲಿ ನಾಲ್ಕು ಸಾವಿರ ಮಂದಿ ಕುಳಿತು ವೀಕ್ಷಿಸಲು ಅವಕಾಶವಿದೆ. ಆರು ಸಾವಿರ ವಿಸ್ತೀರ್ಣದ ವಿಶೇಷ ಅಲಂಕೃತ ವೇದಿಕೆ ನಿರ್ಮಾಣವಾಗಿದೆ. ಹಿಂದೆ ಗ್ರೀನ್‌ರೂಮ್, ಸಭಾಂಗಣವನ್ನು ಅಲಂಕಾರಗಳಿಂದ ಸಿಂಗರಿಸಲಾಗಿದೆ. ಸಮವಸರಣ ಪೂಜೆಗೆ ವಿಶೇಷ 13 ಸಾವಿರ ಚದರ ಅಡಿಯ ವಿಸ್ತೀರ್ಣದ ಸಭಾಂಗಣ ನಿರ್ಮಿಸಲಾಗಿದ್ದು, 1500ಕ್ಕೂ ಅಧಿಕ ಮಂದಿ ಅಲ್ಲಿ ಕುಳಿತುಕೊಳ್ಳಬಹುದು.

ಅಂತಿಮ ಹಂತದ ಸಿದ್ಧತೆ: ಬೆಂಗಳೂರಿನ ಅಶೋಕ ಮತ್ತು ಅವರ ನೃತ್ಯತಂಡ ವೃಷಭನಾಥ, ಭರತ, ಬಾಹುಬಲಿ ಸೇರಿದಂತೆ ಪ್ರಮುಖ ಪಾತ್ರ ವಹಿಸಲಿದೆ. ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು, ಧರ್ಮಸ್ಥಳ ಪರಿಸರದ ಮಂದಿ, ಕರಾವಳಿ ಭಾಗದ 200ಕ್ಕೂ ಅಧಿಕ ಕಲಾವಿದರು ಕಾಣಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದು, ಭಾನುವಾರ ಅಂತಿಮ ಹಂತದ ಸಿದ್ಧತೆ ನಡೆದಿದೆ.

ಮಹಾಮಸ್ತಕಾಭಿಷೇಕದಲ್ಲಿ ಇಂದು: ಬಾಹುಬಲಿ ಬೆಟ್ಟದಲ್ಲಿ ಫೆ.11ರಂದು ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಬೆಳಗ್ಗೆ 7ರಿಂದ ನಿತ್ಯವಿಧಿ ಸಹಿತ 10.5ರ ಮೀನಲಗ್ನದಲ್ಲಿ ಬ್ರಹ್ಮ ಯಕ್ಷ ಪ್ರತಿಷ್ಠಾಪನೆ, ಬೆಳಗ್ಗೆ 8ರಿಂದ ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಗ್ರಹ ಯಜ್ಞ ವಿಧಾನ, ಜಲಾಗ್ನಿ, 108 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞ ಶಾಲೆಯಲ್ಲಿ ಯಾಗ ಮಂಡಲಾರಾಧನಾ ವಿಧಾನ, ಸಾಯಂಕಾಲ ಧ್ವಜ ಪೂಜೆ, ಶ್ರೀಬಳಿ ವಿಧಾನ ಮಹಾಮಂಗಳಾರತಿ. ಕ್ಷೇತ್ರದ ಆವರಣದಲ್ಲಿ ಬಾಹುಬಲಿ ಪಂಚಮಹಾ ವೈಭವ. ಬೆಳಗ್ಗೆ 9.30ಕ್ಕೆ ನವಯುಗ ಆರಂಭ. ಸಾಯಂಕಾಲ 3.30ಕ್ಕೆ ಬಲ ಲೀಲೋತ್ಸವ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 8ರಿಂದ ವಿವಿಧ ಟಿ.ವಿ.ರಿಯಾಲಿಟಿ ಶೋಗಳಿಂದ ಆಯ್ದ ಬಲ ಪ್ರತಿಭೆಗಳಿಂದ ಸಂಗೀತ ಸಂಗಮ. ಸಂಯೋಜನೆ ರಮೇಶ್ಚಂದ್ರ.