ಪಣಂಬೂರು ಬೀಚ್‌ನಲ್ಲಿ ಸುರಕ್ಷತೆಗಿಲ್ಲ ಆದ್ಯತೆ

>

ಲೋಕೇಶ್ ಸುರತ್ಕಲ್
ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಜಿಲ್ಲೆಯ ಪ್ರಸಿದ್ಧ ಪಣಂಬೂರು ಬೀಚ್‌ನಲ್ಲಿ ಕಳೆದ 15 ದಿನದಲ್ಲಿ ಪ್ರೇಮಿಗಳ ಲೂಟಿ, ಕಳವು ಸಹಿತ ಮೂರು ಪ್ರಕರಣ ನಡೆದಿದೆ. ಇದು ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯವನ್ನು ಎತ್ತಿ ತೋರಿಸಿದೆ.
ಏ.27ರಂದು ಮೂವರು ಯುವಕರ ತಂಡ ಬೆಳ್ತಂಗಡಿಯ ಪ್ರೇಮಿಗಳಿಗೆ ರಾತ್ರಿ 8ರ ವೇಳೆಗೆ ಚೂರಿ ತೋರಿಸಿ ಲೂಟಿ ನಡೆಸಿತ್ತು. ಅವರ ಮೊಬೈಲ್, ಪರ್ಸ್‌ಗಳನ್ನು ಅಪಹರಿಸಲಾಗಿತ್ತು. ಅವರನ್ನು ಠಾಣೆಗೆ ಕರೆಸಿದ್ದರೂ ದೂರು ನೀಡಲು ಒಪ್ಪಲಿಲ್ಲ. ಅನೇಕ ಸಲ ಪ್ರೇಮಿಗಳು ದೂರು ನೀಡದೆ ಯಾರ ಗಮನಕ್ಕೂ ತರದೆ ತೆರಳುವ ಸಾಧ್ಯತೆ ಇದ್ದು, ಪ್ರಕರಣ ದಾಖಲಾಗುವುದಿಲ್ಲ.
ಘಟನೆ ನಡೆದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಇರಲಿಲ್ಲ. ಪಾರ್ಕಿಂಗ್ ಸ್ಥಳ ಮೊದಲಾದ ಸ್ಥಳಗಳಲ್ಲಿ ಪೊಲೀಸರು ಹಾಗೂ ಬೀಚ್‌ನವರು ಅಳವಡಿಸಿರುವ ಸಿಸಿ ಕ್ಯಾಮರಾಗಳಿವೆ. ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನಿಯೋಜಿಸಲು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾಂಬರು ರಸ್ತೆ ಮೇಲೆ ಮರಳು:  ರಜಾ ದಿನಗಳಲ್ಲಿ ಪಣಂಬೂರು ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಸಾವಿರಕ್ಕೂ ಹೆಚ್ಚಿರುತ್ತದೆ. ಗೇಟ್ ಪ್ರವೇಶ ದ್ವಾರ ಬಳಿ ಡಾಂಬರು ರಸ್ತೆ ಮೇಲೆ ಪೂರ್ಣ ಪ್ರಮಾಣದಲ್ಲಿ ಮರಳು ಆವರಿಸಿದೆ. ಇದು ಸುರಕ್ಷಿತ ವಾಹನ ಸಂಚಾರಕ್ಕೆ ಸಮಸ್ಯೆ ತಡೆ ಒಡ್ಡಿದೆ ಎಂದು ಪ್ರವಾಸಿಗರು ದೂರಿದ್ದಾರೆ.

ಸಮಸ್ಯೆ ಬಗ್ಗೆ ಮಾಹಿತಿಯಿಲ್ಲ!: ಬೀಚ್‌ನ್ನು ಖಾಸಗಿಯವರಿಗೆ ನಿರ್ವಹಣೆಗೆ ನೀಡಲಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಪರಿಶೀಲನೆ ನಡೆಸುತ್ತೇನೆ. ಬೀಚ್‌ನಲ್ಲಿ ಪ್ರವಾಸಿಗರಿಗೆ ಶೌಚಗೃಹ ಇತ್ಯಾದಿ ಸಮಸ್ಯೆಯಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.