ಪಲಿಮಾರು ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ

< 10ರಂದು ಸನ್ಯಾಸ ದೀಕ್ಷೆ, 12ರಂದು ಪೀಠಾರೋಹಣ>

5ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನಿಯೋಜಿತ ಉತ್ತರಾಧಿಕಾರಿ ಶೈಲೇಶ್ ಉಪಾಧ್ಯಾಯ ಅವರಿಗೆ ಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಬುಧವಾರ ಬೆಳಗ್ಗೆ 6.30ಕ್ಕೆ ಫಲಮಂತ್ರಾಕ್ಷತೆ ನೀಡುವ ಮೂಲಕ ಪಲಿಮಾರು ಮಠಕ್ಕೆ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ.

ಸನ್ಯಾಸ ದೀಕ್ಷೆ ಪೂರ್ವಭಾವಿಯಾಗಿ ಬುಧವಾರ ಮಠದಲ್ಲಿ ವಿದ್ವಾನ್ ಸುಬ್ರಹ್ಮ್ಮಣ್ಯ ಅವಧಾನಿ ನೇತೃತ್ವದಲ್ಲಿ ವಿವಿಧ ಪ್ರಾಯಶ್ಚಿತ್ತ ಹೋಮಗಳು ನೆರವೇರಿದವು. ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ನವಗ್ರಹ ಹೋಮ, ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು.

ಸರ್ವಜ್ಞ ಪೀಠದಲ್ಲಿ ಪಲಿಮಾರು ಶ್ರೀಗಳ ಸಮ್ಮುಖದಲ್ಲಿ ಯೋಗದೀಪಿಕಾ ಗುರುಕುಲದ ಪ್ರಾಧ್ಯಾಪಕರಿಂದ ಶೈಲೇಶ ಉಪಾಧ್ಯಾಯ ಅವರಿಗೆ ಋಗ್ವೇದ ಮಂಗಲೋತ್ಸವ ನಡೆಯಿತು. ಸಂಜೆ ಶೈಲೇಶ ಅವರು ಅಷ್ಟಮಠಗಳಿಗೆ ತೆರಳಿ ವಿವಿಧ ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಶೈಲೇಶ್ ಉಪಾಧ್ಯಾಯ ಅವರ ಮಾತಾ-ಪಿತೃಗಳಾದ ಕೊಡವೂರು ಕಂಬಳಕಟ್ಟದ ಸುರೇಂದ್ರ ಉಪಾಧ್ಯಾಯ – ಲಕ್ಷ್ಮೀ ದಂಪತಿ ಉಪಸ್ಥಿತರಿದ್ದರು.

ಶೈಲೇಶ್ ಉಪಾಧ್ಯಾಯ ಮಂಗಳವಾರ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಸ್ವಗೃಹದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಬಾಲಾಜಿ ರಾಘವೇಂದ್ರ ಆಚಾರ್ಯ, ವಿಷ್ಣು ಆಚಾರ್ಯ, ವಾಸುದೇವ ಕಲ್ಲಂಜೆ, ಶಿವರಾಜ್ ಉಪಸ್ಥಿತರಿದ್ದರು.

ಇಂದು ಆತ್ಮಶ್ರಾದ್ಧ: ಮೇ 9ರಂದು ಬೆಳಗ್ಗೆ ಸನ್ಯಾಸಕ್ಕೆ ಪೂರ್ವಭಾವಿಯಾಗಿ ಋಣವಿಮೋಚನಾ ಕರ್ಮ, ಆತ್ಮಶ್ರಾದ್ಧ, ಗೋದಾನ, ಸಂಜೆ ಶಾಕಲ ಹೋಮ ನಡೆಯಲಿದೆ. ಮೇ 10ರಂದು ಬೆಳಗ್ಗೆ 3.57ರ ಬ್ರಾಹ್ಮೀ ಮುಹೂರ್ತದಲ್ಲಿ ಸನ್ಯಾಸ ದೀಕ್ಷೆ ಮತ್ತು ಪ್ರಣವ ಮಂತ್ರೋಪದೇಶ ಜರುಗಲಿದೆ. 12ರಂದು ಪೀಠಾಧಿಪತಿಯಾಗಿ ಪಟ್ಟಾಭಿಷೇಕ ನೆರವೇರಲಿದೆ. ಶೈಲೇಶ ಅವರು ಪಲಿಮಾರು ಮಠದ ಪರಂಪರೆಯಲ್ಲಿ 31ನೇ ಯತಿಯಾಗಿ ಪೀಠಾರೋಹಣ ಮಾಡಲಿದ್ದಾರೆ.