ಪಾಲಿಕೆ ಇಬ್ಭಾಗ ಹೋರಾಟ ಖಚಿತ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಕುರಿತು ಬಲವಾಗಿ ಕೇಳಿ ಬಂದಿದ್ದ ಕೂಗಿಗೆ ಇದೀಗ ಮತ್ತಷ್ಟು ಶಕ್ತಿ ಬಂದಿದೆ. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ 2ನೇ ಸಭೆಯಲ್ಲಿ, ತಜ್ಞರ ಸಮಿತಿ ಹಾಗೂ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಗಳನ್ನು ರಚಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಯಿತು.

ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ನಂತರ ಹೋರಾಟಗಾರ ಬಿ.ಡಿ. ಹಿರೇಮಠ ಮಾತನಾಡಿ, ನಗರದ ಅನೇಕರಿಗೆ ಪಾಲಿಕೆಯ ಅಂಕಿ, ಅಂಶ ಹಾಗೂ ಇತಿಹಾಸದ ಮಾಹಿತಿ ಇಲ್ಲವಾಗಿದೆ. ಹೀಗಾಗಿ ತಜ್ಞರ ಸಮಿತಿ ಸದಸ್ಯರು ಸಮಗ್ರ ಅಂಕಿ, ಅಂಶಗಳನ್ನು ಸಂಗ್ರಹಿಸಿ ಒಂದು ವಾರದಲ್ಲಿ ತಿಳಿವಳಿಕೆ ಹಾಗೂ ಅಂಕಿ, ಅಂಶಗಳ ಪಕ್ಷಿ ನೋಟ ಸಿದ್ಧಪಡಿಸಬೇಕು ಎಂದರು.

ಇದಲ್ಲದೆ ನಗರದ ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಕೆಲ ಮುಖಂಡರು ಸೇರಿದಂತೆ 30 ಜನರ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ರಚಿಸಲಾಗುವುದು. ನಂತರ ಧಾರವಾಡದ ಎಲ್ಲ ವಾರ್ಡ್​ಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.

ಹೋರಾಟದ ಮೊದಲ ಹಂತವಾಗಿ ಸೆ.10ರಂದು ಬೆಳಗ್ಗೆ 10 ಗಂಟೆಗೆ ಕಲಾಭವನದಿಂದ ಪ್ರತಿಭಟನಾ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕರಿಗೆ ಮನವಿಪತ್ರ ರವಾನಿಸಲಾಗುವುದು. ಇದಾದ ಬಳಿಕ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದರು.

ನಿವೃತ್ತ ಶಿಕ್ಷಣ ಅಧಿಕಾರಿ ವೆಂಕಟೇಶ ಮಾಚಕನೂರ- ಪ್ರತ್ಯೇಕ ಪಾಲಿಕೆಯಿಂದ ಉತ್ತಮ ಆಡಳಿತ ಮಾತ್ರವಲ್ಲದೆ, ನಗರ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಬೇಡಿಕೆ ಕುರಿತು ಸರ್ಕಾರದ ಹಂತದಲ್ಲಿ ಸಮರ್ಪಕವಾಗಿ ವಾದ ಮಂಡಿಸಬೇಕು ಎಂದರು.

ಗುರುರಾಜ ಹುಣಸಿಮರದ- 2011ರ ಜನಗಣತಿ ಪ್ರಕಾರ ಧಾರವಾಡ ಜನಸಂಖ್ಯೆ 2.21 ಲಕ್ಷ ಇದೆ. ಅದಕ್ಕೆ ಕೆಲ ಗ್ರಾಮೀಣ ಪ್ರದೇಶ ಸೇರ್ಪಡಿಸಿ ಸರ್ಕಾರದ ಮನವೊಲಿಸಬೇಕು ಎಂದರು.

ಕೃಷ್ಣ ಜೋಶಿ- ಕೇವಲ ಹೋರಾಟ ನಡೆಸಿದರೆ ಸಾಲದು. ಪ್ರತಿ ವಾರ್ಡ್​ಗಳಲ್ಲಿ ಸಭೆಗಳನ್ನು ನಡೆಸಿ ಜನರ ಬೆಂಬಲ ಪಡೆಯಬೇಕು ಎಂದರು. ಪಾಲಿಕೆ ನಿವೃತ್ತ ಇಂಜಿನಿಯರ್ ಎಸ್.ಬಿ. ಗುತ್ತಲ, ಎನ್.ಜಿ. ರಸಾಳಕರ, ಶಿವಾನಂದ ಭಾವಿಕಟ್ಟಿ, ನಿವೃತ್ತ ಶಿಕ್ಷಣ ಅಧಿಕಾರಿ ವೆಂಕಟೇಶ ಮಾಚಕನೂರ, ಪರಪ್ಪಗೌಡರ, ಬಸವಪ್ರಭು ಹೊಸಕೇರಿ ಅವರನ್ನೊಳಗೊಂಡ ತಜ್ಞರ ಸಮಿತಿ ರಚಿಸಿದ್ದು, ಬಸವಪ್ರಭು ಹೊಸಕೇರಿ ಅವರನ್ನು ಸಂಯೋಜಕರಾಗಿ ನೇಮಿಸಲಾಗಿದೆ. ಬಿ.ಡಿ. ಹಿರೇಮಠ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ಎಸ್.ಬಿ. ಗುತ್ತಲ, ವಿ.ಎಸ್. ಪಾಟೀಲ, ಶಿವಾನಂದ ಭಾವಿಕಟ್ಟಿ, ಸುಭಾಷ ಶಿಂಧೆ, ದಾನಪ್ಪ ಕಬ್ಬೇರ, ರವಿ ಯಲಿಗಾರ, ಪ್ರಕಾಶ ಘಾಟಗೆ, ಲಕ್ಷ್ಮಣ ಬಕ್ಕಾಯಿ, ಇಸಬೆಲ್ಲಾದಾಸ್ ಝೇವಿಯರ್, ಇತರರು ಮಾತನಾಡಿದರು. ವಸಂತ ಅರ್ಕಾಚಾರ, ಆನಂದ ಸಿಂಗನಾಥ್, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಸಲೀಂಸಂಗನ ಮುಲ್ಲಾ, ಗಣೇಶ ಅಮ್ಮಿನಗಡ, ಪ್ರಕಾಶ ದೊಡವಾಡ, ವೆಂಕಟೇಶ ರಾಯ್ಕರ, ಪೊ›. ನಾಗರಾಜ ಹಳ್ಳಿ, ಪಾಲಿಕೆ ಸದಸ್ಯ ರಾಜು ಅಂಬೋರೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇತರರು ಭಾಗವಹಿಸಿದ್ದರು.

ಪಾಪು ಬೆಂಬಲವಿದೆಯೇ?: ಕರ್ನಾಟಕ ಏಕೀಕರಣ ಹೋರಾಟಕ್ಕೆ ವೇದಿಕೆಯಾಗಿದ್ದ ಸ್ಥಳದಿಂದಲೇ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹೀಗಾಗಿ ಈ ಹೋರಾಟಕ್ಕೆ ಜಯ ಸಿಗುವ ಭರವಸೆ ಇದೆ ಎಂದು ಬಸವಪ್ರಭು ಹೊಸಕೇರಿ ಅಭಿಪ್ರಾಯಪಟ್ಟರು. ಅವರಿಗೆ ಮರು ಪ್ರಶ್ನೆ ಹಾಕಿದ ಆನಂದ ಜಾಧವ, ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಡಾ. ಪಾಟೀಲ ಪುಟ್ಟಪ್ಪ ಬೆಂಬಲವಿದೆಯೇ? ಹುಬ್ಬಳ್ಳಿಯಲ್ಲಿ ವಾಸವಾಗಿರುವ ಅವರು ಈ ಹೋರಾಟಕ್ಕೆ ಬೆಂಬಲ ನೀಡುವರೆ ಎಂಬುದನ್ನು ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಲಿ ಎಂದರು. ಇದಕ್ಕೆ ಅನೇಕ ಸಭಿಕರೂ ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಬಸವಪ್ರಭು ಹೊಸಕೇರಿ, ಈ ಕುರಿತು ಪುಟ್ಟಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.