ಎಡಗೈ ಮನವೊಲಿಸಿದ ರಾಹುಲ್ ಗಾಂಧಿ

ರಾಯಚೂರು/ಕಲಬುರಗಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯ ಮೂರನೇ ದಿನವಾದ ಸೋಮವಾರವೂ ರಾಯಚೂರು, ದೇವದುರ್ಗ, ಶಹಾಪುರ, ಜೇವರ್ಗಿ ಹಾಗೂ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿರುದ್ಧ ಕಿಡಿಕಾರಿದರು. ಭಾನುವಾರ ಪ್ರತಿಭಟನೆ ಬಿಸಿ ಎದುರಿಸಿದ್ದ ರಾಹುಲ್, ಸೋಮವಾರ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಹೋರಾಟಗಾರರ ಸಮಾಧಾನಕ್ಕೆ ಮುಂದಾಗಿದ್ದು ಗಮನಾರ್ಹವಾಗಿತ್ತು.

ಪರಿಶಿಷ್ಟರ ಎಡ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂಬ ಕೂಗಿಗೆ ಸ್ಪಂದಿಸಿರುವ ರಾಹುಲ್, ಇವರ ಮತಗಳನ್ನು ಪಕ್ಷದ ಕಡೆ ಸೆಳೆಯಲು ಮುಂದಾಗಿದ್ದಾರೆ. ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿ, ಸದ್ಯದ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರಕ್ಕೆ ಶಿಫಾರಸು ಮಾಡಿ: ರಾಯಚೂರು ಅತಿಥಿಗೃಹದಲ್ಲಿ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ವಿವಿಧ ಮಾದಿಗ ಸಮುದಾಯದ ಸಂಘಟನೆಗಳ ಪ್ರಮುಖರನ್ನು ಕರೆಸಿ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಒಂದೂವರೆ ಕೋಟಿ ಮಾದಿಗರಿದ್ದು, ಸರ್ಕಾರದ ವಿಳಂಬದಿಂದ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಆಯೋಗದ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದಾಗ, ವರದಿ ಶಿಫಾರಸು ಮಾಡಿ ಕೇಂದ್ರಕ್ಕೆ ಕಳಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಸೂಚಿಸಿದರು.

ದೇಶಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿ

ಕರ್ನಾಟಕ ಸರ್ಕಾರ ಬಡವರು, ದೀನದಲಿತರ ನೆರವಿಗೆ ಧಾವಿಸಲು ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ದೇಶಾದ್ಯಂತ ಇರುವ ಬಡವರಿಗಾಗಿ ಇಂತಹ ಕ್ಯಾಂಟೀನ್​ಗಳನ್ನು ಆರಂಭಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಸಾಲ ಮನ್ನಾ ಮಾಡಿಸಿದ್ದು ರಾಹುಲ್!

ಪ್ರಧಾನಿಯವರನ್ನು ಒಮ್ಮೆ ಭೇಟಿ ಮಾಡಿದಾಗ ದೇಶದ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಕೇಳಿದ್ದೆ, ಅವರು ತುಟಿ ಬಿಚ್ಚಲಿಲ್ಲ. ನಂತರ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಕರ್ನಾಟಕದ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಲಮನ್ನಾ ಮಾಡಬಹುದೇ ಎಂದು ಕೇಳಿದೆ. ಅವರು ಸಾಲಮನ್ನಾ ಮಾಡಿದರು, ಆದರೆ ರಾಷ್ಟ್ರೀಕೃತ ಬ್ಯಾಂಕ್​ಗಳದ್ದು ಕೇಂದ್ರ ಮಾಡಬೇಕಾಗಿದೆ ಎಂದು ರಾಹುಲ್ ಗಾಂಧಿ ಯಾತ್ರೆಯ ಉದ್ದಕ್ಕೂ ತಿಳಿಸಿದರು.

ಆವೋ ಖರ್ಗೆಜೀ.. ಏ ಲೇ..ಕಾವೋ

ರಾಯಚೂರು ತಾಲೂಕು ಕಲ್ಮಾಲ ಗ್ರಾಮದ ಬೀದಿಬದಿಯಲ್ಲಿ ಮೌಲಾಸಾಬ್ ಎಂಬುವರ ಹೋಟೆಲೊಂದಕ್ಕೆ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ‘ಆವೋ ಖರ್ಗೆ ಜೀ.. ಏ ಲೋ.. ಏ ಕಾವೋ.. ಎ ನವೆ ಐಡಿಯಾ ಹೈ..’ ಎನ್ನುತ್ತಾ ಮಿರ್ಚಿ-ಮಂಡಕ್ಕಿ ಮತ್ತು ಒಗ್ಗರಣೆ ರುಚಿ ಸವಿದರು. ಈ ನಡುವೆ ಹೋಟೆಲ್ ಮಾಲೀಕನ ಸಹೋದರಿಯೊಂದಿಗೆ ಮಾತನಾಡಿ ‘ನಿಮಗೆಷ್ಟು ಮಕ್ಕಳು ? ಹೇಗಿದೆ ವ್ಯಾಪಾರ’ ಎಂದು ಕುಶಲೋಪರಿ ವಿಚಾರಿಸಿದರು. ನಂತರ ಸಿದ್ದರಾಮಯ್ಯ ಸಹ ಆಕೆಯನ್ನು ಮಾತನಾಡಿಸಿ ‘ನಾನು ಯಾರೆಂದು ಗೊತ್ತೇ’ ಎಂದು ಪ್ರಶ್ನಿಸಿದರು. ಇದಕ್ಕೆ ಆ ಮಹಿಳೆ ‘ನೀವು ಮುಖ್ಯಮಂತ್ರಿ ಸರ್’ ಎಂದರು. ನಂತರ ಸಿದ್ದರಾಮಯ್ಯ ಎರಡು ಸಾವಿರ ರೂ. ನೀಡಿದಾಗ, ಅದನ್ನು ಮಹಿಳೆ ನಿರಾಕರಿಸಿದರು.

ಯಾತ್ರೆಯಲ್ಲಿ ಕಂಡಿದ್ದು

# ಬೆಳಗ್ಗೆ ರಾಯಚೂರು ಐಬಿಯಿಂದ ಹೊರಟ ಯಾತ್ರೆಯು ಮೊದಲು ಭೇಟಿ ಇತ್ತಿದ್ದು ಶಂಶೆ ಅಲಂ ದರ್ಗಾಗೆ.

# ರಾಯಚೂರು ಪಟ್ಟಣದಲ್ಲಿ ಯುವ ಕಾಂಗ್ರೆಸಿಗರು ಬೃಹತ್ ಧ್ವಜದೊಂದಿಗೆ ಸ್ವಾಗತಿಸಿದರು.

# ದೇವದುರ್ಗದಲ್ಲಿ ಆಜಾನ್ ಪ್ರಾರ್ಥನೆ ಹಿನ್ನೆಲೆ 2 ನಿಮಿಷ ಭಾಷಣ ನಿಲ್ಲಿಸಿದ ರಾಹುಲ್ ನಂತರ ಆರಂಭಿಸಿದರು.

# ಕಲಬುರಗಿಯಲ್ಲಿ ಧರಂಸಿಂಗ್ ಅವರನ್ನು ಸ್ಮರಿಸಿದ ರಾಹುಲ್, 371ಜೆ ಜಾರಿಗೆ ಖರ್ಗೆ ಮತ್ತು ಧರಂ ಕಾರಣ ಎಂದರು.

# ಶಹಾಪುರದಲ್ಲಿ ರೋಡ್ ಶೋ ವೇಳೆ ಸೆಲ್ಪಿಗಾಗಿ ಯಾತ್ರೆಯ ಬಸ್ ಏರಿದ ಬಾಲಕನ ಜತೆ ರಾಹುಲ್ ಸೆಲ್ಪಿ ತೆಗೆದುಕೊಂಡರು.

ಮೂರೂ ದಿನ ಒಂದೇ ಕತೆ

ಮೂರು ದಿನಗಳ ಭಾಷಣದಲ್ಲಿ ರಾಹುಲ್ ಅದದೇ ಅಂಶಗಳನ್ನೇ ಹೇಳುತ್ತ ಬಂದಿದ್ದು, ಸಾರ್ವಜನಿಕರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ಮೋದಿ ರೀತಿ ಹಾವಭಾವ, ಏರಿಳಿತ ಕಾಣುವುದಿಲ್ಲ ಎಂಬ ಬೇಸರ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ‘ಟಾಟಾ ನ್ಯಾನೊಗೆ ಮೋದಿ 30 ಸಾವಿರ ಎಕರೆ ಭೂಮಿ ಕೊಟ್ಟರು..’ ‘ಮೋದಿ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ’, ’ರಫೇಲ್ ಡೀಲ್’, ರಿಯರ್ ಮಿರರ್ ವ್ಯೂ, ‘ಅಮಿತ್ ಶಾ ಪುತ್ರನ ಆಸ್ತಿ ಹೆಚ್ಚಳ’, ಇತ್ಯಾದಿ ಹೇಳಿಕೆಗಳನ್ನೇ ಎಲ್ಲ ಕಡೆ ಸಮಾವೇಶದಲ್ಲಿ ಹೇಳುತ್ತ ಬಂದಿದ್ದರ ಪರಿಣಾಮ ನಾಲ್ಕೈದು ರ್ಯಾಲಿಗಳಲ್ಲಿ ರಾಹುಲ್ ಭಾಷಣ ಮಾಡುವಾಗಲೇ ಜನ ಎದ್ದು ಹೋಗಲಾರಂಭಿಸಿದ್ದರು. ಹೀಗಾಗಿ ಮೊದಲು ರಾಹುಲ್ ಭಾಷಣ, ನಂತರ ಸಿಎಂ, ಖರ್ಗೆ, ಡಿಕೆ ಶಿವಕುಮಾರರಿಂದ ಭಾಷಣ ಮಾಡಿಸುವ ಕೆಲಸವೂ ನಡೆಯಿತು. ಈ ಮಾತುಗಳು, ರೋಡ್ ಶೋ ಯಾವ ರೀತಿ ಕಾಂಗ್ರೆಸ್ ಪರ ಒಲವು ಬದಲಿಸುತ್ತದೆ ಎಂಬುದನ್ನು ಚುನಾವಣೆಯ ನಂತರವೇ ತಿಳಿಯಬೇಕು. ಮೋದಿ, ಅಮಿತ್ ಷಾ ಇನ್ನೇನು ಸಮೀಕರಣ ಮಾಡುತ್ತಾರೋ? ಎಂಬ ಭಯ ರಾಜ್ಯ ನಾಯಕರನ್ನು ಕಾಡಿದ್ದು, ಅದಕ್ಕೆ ಸ್ಥಳೀಯ ನಾಯಕತ್ವದಿಂದಲೇ ತಿರುಗೇಟು ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಕಿರಿಯ ನಾಯಕರೊಬ್ಬರು ತಿಳಿಸಿದರು.

ಕಪ್ಪು ಬಾವುಟ, ಐವರ ಸೆರೆ

ಭಾನುವಾರ ರಾಹುಲ್ ಪ್ರಯಾಣಿಸುತ್ತಿದ್ದ ಬಸ್ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿದ್ದ ದಸಂಸದ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೋದಿ ಮೇಲೆ ಖರ್ಗೆ, ಸಿಎಂ ಏಕವಚನಾಸ್ತ್ರ!

ಜೇವರ್ಗಿಯಲ್ಲಿ ನಡೆದ ಜನಾಶೀರ್ವಾದ ರ್ಯಾಲಿಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಏಕವಚನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿರುವ ಅನೇಕ ಅಣೆಕಟ್ಟೆಗಳನ್ನು ಕಟ್ಟಿದ್ದು ಯಾರು? ಇವನು ಅದನ್ನು ನಾನೇ ಕಟ್ಟಿಸಿದ್ದು ಎಂದು ಹೇಳಿಕೊಂಡು ಬಿಡುತ್ತಾನೆ ಎಂದು ಏಕವಚನದಲ್ಲೇ ಹರಿಹಾಯ್ದರು. ದೇಶದಲ್ಲಿರುವ ಇಷ್ಟು ಪ್ರಮಾಣದ ರಸ್ತೆ, ಐಐಎಸ್ಸಿ, ಐಐಟಿಯಂತಹ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳನ್ನು ನಮ್ಮ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಮಾಡಿವೆ. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾನೆ ಎಂದು ಟೀಕಿಸಿದರು.

ಮನೆ ಕಾಯೋಗ

ಇದಕ್ಕೂ ಮೊದಲು ನಡೆದ ರ್ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೋದಿಯನ್ನು ಉದ್ದೇಶಿಸಿ, ‘ಇವನ ಮನೆ ಕಾಯೋಗ..’ ಎಂದು ಕಿಡಿಕಾರಿದರು.

ನಗೆ ಇಷ್ಟವಾದ ಜಾಗಕ್ಕೆ ನಾನು ಹೋಗುತ್ತೇನೆ. ಅದರಲ್ಲಿ ತಪ್ಪೇನು? ಅದು ಮಂದಿರ ಅಥವಾ ಮಸೀದಿ ಆಗಿರಬಹುದು. ಯಾವುದೇ ಧಾರ್ವಿುಕ ಕೇಂದ್ರಗಳಿಗಾದರೂ ಹೋಗುತ್ತೇನೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಶಾಸಕ ಮಾಲಕರಡ್ಡಿ ಭೇಟಿ

ಯಾದಗಿರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾಯಚೂರಿನಲ್ಲಿ ಭಾನುವಾರ ರಾತ್ರಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಭೇಟಿ ಮಾಡಿ ಪಕ್ಷದ ಸ್ಥಿತಿಗತಿ ಕುರಿತು ಸಮಾಲೋಚಿಸಿದರು. ಪಕ್ಷದ ವರಿಷ್ಠ ನಾಯಕರ ನಡೆಯಿಂದ ತಮಗೆ ಆಗಿರುವ ಬೇಸರ, ನೋವನ್ನು ತೋಡಿಕೊಂಡರು. ಈ ವೇಳೆ, ನೀವು ದೆಹಲಿಗೆ ಬನ್ನಿ ಎಂದು ರಾಹುಲ್ ಬುಲಾವ್ ನೀಡಿದ್ದಾರೆ.

Leave a Reply

Your email address will not be published. Required fields are marked *