More

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್​ ಮುಷರಫ್​ಗೆ ಬಿಗ್​ ರಿಲೀಫ್​; ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಲಾಹೋರ್​ ಹೈಕೋರ್ಟ್​

    ಲಾಹೋರ್​: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಾಜಿ ಸೇನಾ ಮುಖ್ಯಸ್ಥ ಫರ್ವೇಜ್​ ಮುಷರಫ್​ ಅವರಿಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಪಾಕಿಸ್ತಾನಿ ಹೈಕೋರ್ಟ್​ ರದ್ದುಗೊಳಿಸಿದೆ.

    2007ರ ನವೆಂಬರ್​ನಲ್ಲಿ ಮುಷರಫ್​ ಅವರು ಸಂವಿಧಾನಕ್ಕೆ ವಿರುದ್ಧವಾಗಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದನ್ನು ದೇಶದ್ರೋಹ ಎಂದು ಪರಿಗಣಿಸಿದ್ದ ಪೇಷಾವರ ಹೈಕೋರ್ಟ್​ನ ವಿಶೇಷ ಪೀಠ ಅವರಿಗೆ ಮರಣದಂಡನೆ ವಿಧಿಸಿ ಡಿಸೆಂಬರ್​ 17ರಂದು ತೀರ್ಪು ನೀಡಿತ್ತು.

    ಈಗ ಮುಷರಫ್​ ಅವರಿಗೆ ಮರಣದಂಡನೆ ವಿಧಿಸುವುದೇ ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿದ ಕೋರ್ಟ್​ ಶಿಕ್ಷೆಯನ್ನು ಹಿಂಪಡೆದಿದೆ ಎಂದು ಸರ್ಕಾರಿ ವಕೀಲರೋರ್ವರು ತಿಳಿಸಿದ್ದಾರೆ.
    ಮರಣದಂಡನೆ ವಿಧಿಸಿದ್ದ ಮೂರು ನ್ಯಾಯಮೂರ್ತಿಗಳನ್ನೊಂಡ ಪೀಠ, ಒಂದೊಮ್ಮೆ ಮುಷರಫ್​ ಅವರು ನೇಣುಶಿಕ್ಷೆಗೂ ಮೊದಲೇ ಮೃತಪಟ್ಟರೆ ಅವರ ಮೃತದೇಹವನ್ನೇ ಮೂರು ದಿನಗಳ ಕಾಲ ನೇಣಿಗೇರಿಸಿ ಇಡಬೇಕು ಎಂದು ಸೂಚನೆ ನೀಡಿತ್ತು.

    ತಮ್ಮನ್ನು ದೇಶದ್ರೋಹಿ ಎಂದು ಪರಿಗಣಿಸಿದ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿದ ಮುಷರಫ್​ ಅರ್ಜಿ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಲಾಹೋರ್​ ಹೈಕೋರ್ಟ್, ಮುಷರಫ್​ ವಿರುದ್ಧ ದಾಖಲಾದ ದೂರು ಮತ್ತು ಅದರ ಉದ್ದೇಶಗಳೆಲ್ಲ ಅಸಾಂವಿಧಾನಿಕ ಎಂದು ಘೋಷಿಸಿ ಶಿಕ್ಷೆಯನ್ನು ಹಿಂಪಡೆದಿದೆ.

    ಮುಷರಫ್​ಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಲಾಹೋರ್​ ಹೈಕೋರ್ಟ್ ರದ್ದುಪಡಿಸಿದ್ದಾಗಿ ಅವರ ಪರ ವಕೀಲರಾದ ಅಝರ್ ಸಿದ್ಧಕಿ ಸ್ಪಷ್ಟಪಡಿಸಿದ್ದಾರೆ.

    ಏನಿದು ಪ್ರಕರಣ? ಮುಷರಫ್​ ಪಾಕಿಸ್ತಾನ ಸೇನಾ ಮುಖ್ಯಸ್ಥರೂ ಆಗಿದ್ದವರು. 1999ರಿಂದ 2008ರವರೆಗೆ ಅಧ್ಯಕ್ಷರಾಗಿದ್ದ ಮುಷರಫ್​, ರಾಜಕೀಯ ಬಿಕ್ಕಟ್ಟಿನ ಕಾರಣಕ್ಕೆ 2007ರ ನವೆಂಬರ್​ನಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದರು. ಅದು ಡಿಸೆಂಬರ್​ 15ರವರೆಗೆ ಮುಂದುವರಿದಿತ್ತು. ಹೀಗೆ ತುರ್ತುಪರಿಸ್ಥಿತಿ ಹೇರಿದ 25 ದಿನಕ್ಕೆ ತಮ್ಮ ಸೇನಾ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗೆ ಸಂಸತ್ತನ್ನು ಅಮಾನತು ಮಾಡಿದ್ದು ಸಂವಿಧಾನ ವಿರೋಧಿ ಎಂದು 2013ರಲ್ಲಿ ಪಾಕ್​ ಸರ್ಕಾರ ಮುಷರಫ್​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿತ್ತು.

    ನಂತರ 2014ರ ಮಾರ್ಚ್​ 31ರಂದು ಮುಷರಫ್​ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್​ನಲ್ಲಿ ಪೇಷಾವರ ವಿಶೇಷ ನ್ಯಾಯಾಲಯದ ಎದುರು ಸರ್ಕಾರ ಮುಷರಫ್ ವಿರುದ್ಧ ಸಕಲ ದಾಖಲೆಗಳನ್ನೂ ಒದಗಿಸಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts