ಭಾರತೀಯ ಸೇನೆ ಮೇಲೆ ಪಾಕ್‌ನಿಂದ ವಿಷಪ್ರಾಶನ ಪಿತೂರಿ, ಗುಪ್ತಚರ ಮೂಲಗಳಿಂದ ಮಾಹಿತಿ

ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಮತ್ತೊಂದು ಪಿತೂರಿ ನಡೆಸಲು ಸಜ್ಜಾಗುತ್ತಿದ್ದು, ಪಾಕಿಸ್ತಾನ ಮಿಲಿಟರಿ ಗುಪ್ತಚರ (ಎಂಐ) ಮತ್ತು ಐಎಸ್ಐ ಯೋಜನೆ ರೂಪಿಸುತ್ತಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ.

ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪಾಕ್‌ನ ಎಂಐ ಮತ್ತು ಐಎಸ್ಐ ಏಜೆಂಟರು ಕಣಿವೆಯಲ್ಲಿ ನಿಯೋಜಿಸಲಾಗಿರುವ ಭಾರತೀಯ ಭದ್ರತಾ ಪಡೆಗಳ ಪಡಿತರ ದಾಸ್ತಾನಿನಲ್ಲಿ ವಿಷವನ್ನು ಮಿಶ್ರಣ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಖಾಸಗಿ ಸುದ್ದಿವಾಹಿನಿಗೆ ದೊರಕಿರುವ ಸೇನಾ ಟಿಪ್ಪಣಿಯಲ್ಲಿ, ಎಲ್ಲ ಸೇನಾ ಶಿಬಿರಗಳ ಪಡಿತರ ದಾಸ್ತಾನು ಕುರಿತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗಿದ್ದು, ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭದ್ರತಾ ಪಡೆಗಳಿಗೆಂದು ಸಂಗ್ರಹಿಸಲಾಗಿರುವ ಎಲ್ಲ ಪಡಿತರ ದಾಸ್ತಾನನ್ನು ಕೂಡ ಯಾವುದೇ ಅನಪೇಕ್ಷಿತ ಘಟನೆ ಅಥವಾ ಪ್ರಯತ್ನವನ್ನು ತಳ್ಳಿಹಾಕುವ ಸಲುವಾಗಿ ಆಗಾಗ್ಗೆ ತಪಾಸಣೆಗೆ ಒಳಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಕಾಶ್ಮೀರದಲ್ಲಿನ ಪರಿಸ್ಥಿತಿಯು ಗಡಿಯಾಚೆಗಿನ ಸಂಘರ್ಷದಿಂದಾಗಿ ಉದ್ವಿಗ್ನತೆಯಿಂದ ಉಳಿದುಕೊಂಡಿದೆ ಎಂದು ಹೊಸ ಇಂಟೆಲ್ ನೋಟ್ ಹೊರಹೊಮ್ಮಿದೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಮಿಲಿಟರಿಯಿಂದ ಹೊಸದಾದ ಗಡಿ ದಾಳಿಯಲ್ಲಿ ಮೂವರು ನಾಗರಿಕರನ್ನು ಕೊಲ್ಲಲಾಯಿತು.

ಇತ್ತೀಚಿನ ಬೆಳವಣಿಗೆಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನದ ಪರಿಸ್ಥಿತಿಯು ನಿರ್ಮಾಣವಾಗಿದ್ದು, ಪಾಕಿಸ್ತಾನಿ ಮಿಲಿಟರಿ ಪಡೆಯಿಂದ ಮಾರ್ಟರ್​ ಶೆಲ್‌ ದಾಳಿಯು ಮುಂದುವರಿದಿದೆ. ನಿನ್ನೆಯಷ್ಟೇ ಶೆಲ್‌ ದಾಳಿಯಿಂದಾಗಿ ಗಡಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. (ಏಜೆನ್ಸೀಸ್)