ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಯತ್ನಿಸುತ್ತಿದ್ದ ಪಾಕ್‌ ಉಗ್ರನ ಬಂಧನ

ಶ್ರೀನಗರ: ಕಳೆದ ಎರಡು ವರ್ಷಗಳಿಂದಲೂ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಭಯೋತ್ಪಾದನೆಯ ಪುನರುಜ್ಜೀವನಕ್ಕೆ ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರನನ್ನು ಬಂಧಿಸಲಾಗಿದೆ ಎಂದು ಭದ್ರತಾಪಡೆ ತಿಳಿಸಿದೆ.

ಬಂಧಿತ ಉಗ್ರ ಮೊಹಮ್ಮದ್ ವಕಾರ್ ಲಷ್ಕರ್‌ ಇ ತೊಯ್ಬಾ ಉಗ್ರ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದ್ದ. 2017ರ ಜುಲೈನಲ್ಲಿ ಗಡಿ ನುಸುಳಿ ಬಂದಿದ್ದ ಈತ ಬಾರಾಮುಲ್ಲಾದಲ್ಲಿ ಮತ್ತೆ ಭಯೋತ್ಪಾದನೆಯನ್ನು ಪ್ರಾರಂಭಿಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಲ್ಲಾ ಮಿಯಾನಾದ ನಿವಾಸಿಯಾಗಿರುವ ಮೊಹಮ್ಮದ್ ವಾಕರ್‌ಗೆ ಪಾಕಿಸ್ತಾನ ಆಕ್ರಮಿತ ಮುಝಾಫರ್‌ಬಾದ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂದು ಹಿರಿಯ ಸೂಪರಿಂಡೆಂಟ್‌ ಪೊಲೀಸ್‌ ಅಬ್ದುಲ್‌ ಖಾಯೂಮ್‌ ತಿಳಿಸಿದ್ದಾರೆ.

“ಮುಸ್ಲಿಮರಿಗೆ ಕಾಶ್ಮೀರದಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ. ಅವರನ್ನು ಹಿಂಸೆಗೆ ಒಳಪಡಿಸಲಾಗುತ್ತಿದೆ ಮತ್ತು ಅವರ ಮನೆಗಳನ್ನು ನಾಶ ಮಾಡಲಾಗುತ್ತಿದೆ ಎಂದು ಸುಳ್ಳು ಮಾಹಿತಿಯನ್ನು ಹೇಳುವ ಮೂಲಕ ವಾಕರ್‌ನನ್ನು ಭಯೋತ್ಪಾದನೆಗೆ ಇಳಿಯುವಂತೆ ಪ್ರೇರೇಪಿಸಲಾಗಿತ್ತು. ಯುವಕರನ್ನು ಭಯೋತ್ಪಾದನೆಗೆ ಇಳಿಯಲು ಹೇಗೆಲ್ಲ ಮಾಡುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಆದರೆ ತಾನು ಕೇಳಿದ್ದ ವಿಚಾರದಂತೆ ರಾಜ್ಯದ ಪರಿಸ್ಥಿತಿಯು ಇರಲಿಲ್ಲ ಎಂದು ವಾಖರ್‌ ಒಪ್ಪಿಕೊಂಡಿದ್ದಾನೆ. ವಾಖರ್‌ನಿಂದಾಗಿ ಉಗ್ರರು ಭಯೋತ್ಪಾದನೆಗೆ ಹೇಗೆ ತರಬೇತಿ ನೀಡುತ್ತಾರೆ ಮತ್ತು ಭಾರತದಲ್ಲಿ ದಾಳಿ ನಡೆಸಲು ಪಾಕ್‌ನಿಂದ ಗಡಿಯಲ್ಲಿ ಹೇಗೆ ನುಸುಳಿಸುತ್ತಾರೆ ಎನ್ನುವುದು ತಿಳಿದುಬಂದಿದೆ. ಆದರೆ ವಾಖರ್‌ ಯಾವುದೇ ದಾಳಿಯನ್ನು ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳ ಕಾಲ ವಾಕರ್‌ಗೆ ರಾವಲ್ಪಿಂಡಿ ಎಲ್‌ಇಟಿಯ ಜಾಕಿ ಉರ್‌ ರೆಹಮಾನ್‌ ಲಖ್ವಿ ನಿವಾಸದಲ್ಲಿ ತರಬೇತಿ ನೀಡಲಾಗಿತ್ತು ಮತ್ತು ಈ ಅವಧಿಯಲ್ಲಿ ಎರಡು ಭಾರಿ ಲಖ್ವಿಯನ್ನು ಭೇಟಿಯಾಗಿದ್ದ ಎಂದು ತಿಳಿದುಬಂದಿದೆ. (ಏಜೆನ್ಸೀಸ್)