ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ

ಪ್ರಧಾನಿಗೆ ಬಿಜೆಪಿ ಜಿಲ್ಲಾ ಸಮಿತಿ ಒತ್ತಾಯ

ರಾಯಚೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಆತ್ಮಾಹುತಿ ದಾಳಿಗೆ ಕುಮ್ಮಕ್ಕು ನೀಡಿದ ಪಾಕ್ ವಿರುದ್ಧ ಪ್ರಧಾನಿ ದಿಟ್ಟ ನಿಲುವು ತಾಳಬೇಕೆಂದು ಒತ್ತಾಯಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಭಾನುವಾರ ಧರಣಿ ನಡೆಸಿತು.

ಉಗ್ರರಿಗೆ ಆಶ್ರಯ ನೀಡಿದ ಪಾಕ್ ಸರ್ಕಾರದಿಂದ ದೇಶದಲ್ಲಿ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ, ಕೇಂದ್ರ ಸರ್ಕಾರ ಉಗ್ರ ಗಾಮಿಗಳಿಗೆ ತಕ್ಕ ಉತ್ತರ ನೀಡಬೇಕು. ಹೇಯ ಕೃತ್ಯ ಎಸಗಿದವರ ರಕ್ಷಣೆಗೆ ಪಾಕ್ ಸರ್ಕಾರ ನಿಂತಿರುವುದು ನೀಚತನದ ಪರಮಾವಧಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಸೈನಿಕರ ಕುಟುಂಬಕ್ಕೆ ಸರ್ಕಾರ ಧೈರ್ಯ ತುಂಬಬೇಕು. ಪಾಕಿಸ್ತಾನವನ್ನು ಒಂಟಿಯಾಗಿಸಲು ದುಷ್ಕೃತ್ಯದ ಕುರಿತು ವಿಶ್ವದ ಇತರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡಬೇಕು. ಉಗ್ರ ಚಟುವಟಿಕೆ ಬೆಂಬಲಿಸುವವರನ್ನು ಯಾರೂ ಸಹಿಸಬಾರದು. ದಿಟ್ಟ ಕ್ರಮ ಕೈಗೊಂಡು ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಎನ್.ಶಂಕ್ರಪ್ಪ, ಆರ್.ತಿಮ್ಮಯ್ಯ, ದೊಡ್ಡಮಲ್ಲೇಶ, ಶರಣಮ್ಮ ಕಾಮರೆಡ್ಡಿ, ಶಶಿಧರ ಮಸ್ಕಿ, ಕೆ.ಎಂ.ಪಾಟೀಲ್, ಗಿರೀಶ್ ಕನಕವೀಡು, ರಾಮಚಂದ್ರ, ಎ.ಚಂದ್ರಶೇಖರ, ಎಲ್.ಜಿ.ಶಿವಕುಮಾರ್, ಯು.ಆಂಜನೇಯ, ಬಸವರಾಜ ಅಚ್ಚೊಳ್ಳಿ, ಜಗದೀಶ, ರಾಜಕುಮಾರ್ ಇತರರಿದ್ದರು.

ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ
ಉಗ್ರರ ಕೃತ್ಯ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶ್ರೀರಾಮಸೇನೆ ಪದಾಧಿಕಾರಿಗಳು ಭಾನುವಾರ ಪಾಕ್ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪಾಕ್ ಹೇಯಕೃತ್ಯದಿಂದ ದೇಶದ ವೀರ ಯೋಧರು ಹುತಾತ್ಮರಾಗಿದ್ದಾರೆ. ಬಲಿದಾನಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಈವರೆಗೂ ಪಾಕಿಸ್ತಾನಕ್ಕೆ ನೀಡಿದ ಶಾಂತಿ ಮಾತುಕತೆಯ ಅವಕಾಶಗಳು ಸಾಕು. ಬುದ್ಧಿ ಕಲಿಯದ ಆ ದೇಶದ ವಿರುದ್ಧ ಯುದ್ಧ ಸಾರುವುದೊಂದೇ ಪರಿಹಾರ ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಮಂಜುನಾಥ ಬಾವಿ, ಓಂಕಾರ ಯಾದವ್, ಪ್ರಶಾಂತ ಭಂಡಾರಿ, ಹರೀಶ, ವಿಜಯ ಪ್ರಸಾದ್, ದೇವರಾಜ್ ಧರ್ಮಣ್ಣನವರ್, ಶರಣು, ವೀರೇಶ ನಾಯಕ ಇತರರಿದ್ದರು.

ರಾಯಚೂರಿನ ಡಿಸಿ ಕಚೇರಿ ಮುಂದೆ ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ಹಚ್ಚಿ ಶ್ರೀರಾಮ ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.