ನಕಲಿ ಮದುವೆ ಹೆಸರಿನಲ್ಲಿ ಪಾಕ್​ ಯುವತಿಯರನ್ನು ಚೀನಾಗೆ ಸಾಗಿಸುವುದರ ಹಿಂದಿನ ಮರ್ಮ ಭೇದಿಸಿದ ಅಧಿಕಾರಿಗಳು

ಇಸ್ಲಮಾಬಾದ್​: ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ 12 ಶಂಕಿತ ಸದಸ್ಯರನ್ನು ಪಾಕಿಸ್ತಾನದ ಅಧಿಕಾರಿಗಳು ಕಳೆದ ಸೋಮವಾರ ಬಂಧಿಸಿರುವ ಘಟನೆ ವರದಿಯಾಗಿದೆ. ಆರೋಪಿಗಳು ಪಾಕಿಸ್ತಾನದ ಯುವತಿಯರನ್ನು ನಕಲಿ ಮದುವೆ ಹೆಸರಿನಲ್ಲಿ ಚೀನಾಗೆ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಇಂತಹ ಪ್ರಕರಣಗಳು ಪಾಕ್​ನಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದರಿಂದ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ.

ಬಂಧಿತರಲ್ಲಿ 12 ಆರೋಪಿಗಳಲ್ಲಿ 8 ಮಂದಿ ಚೀನಾ ಮೂಲದವರಾಗಿದ್ದು, ಉಳಿದ ನಾಲ್ವರು ಪಾಕಿಸ್ತಾನ ಮೂಲದವರೆಂದು ಮಾನವ ಕಳ್ಳಸಾಗಣೆ ಪ್ರಕರಣಗಳ ಮೇಲೆ ನಿಗಾವಹಿಸುವ ಪಾಕಿಸ್ತಾನ ಫೆಡರಲ್​ ತನಿಖಾ ಸಂಸ್ಥೆ(ಎಫ್​ಐಎ)ಯ ಉನ್ನತ ತನಿಖಾಧಿಕಾರಿ ಜಮೀಲ್​ ಅಹ್ಮದ್​ ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಯುವತಿಯರನ್ನು ಚೀನಾಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಾರೆ ಎಂಬ ಮಾಹಿತಿಯನ್ನು ಎಫ್​​ಐಎ ಕಲೆಹಾಕಿದ ಬಳಿಕ ಅದರ ಜಾಲವನ್ನು ಭೇದಿಸಿದ್ದೇವೆ. ಪಾಕ್​ನಲ್ಲಿರುವ ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಅನೇಕ ಜಾಲಗಳು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮಾಹಿತಿ ಇದೆ ಎಂದು ಮಾಧ್ಯಮಗಳಿಗೆ ಅಹ್ಮದ್​ ಹೇಳಿದ್ದಾರೆ.

ಪಾಕ್​ನಿಂದ ಚೀನಾಗೆ ಯುವತಿಯನ್ನು ಕಳ್ಳಸಾಗಣೆ ಮಾಡುತ್ತಾರೆ ಎಂದು ಪಾಕ್​ನ ಮಾನವ ಹಕ್ಕು ಆಯೋಗ ಎಚ್ಚರಿಕೆ ನೀಡಿದ ಒಂದು ವಾರದ ಬಳಿಕ 12 ಮಂದಿಯನ್ನು ಬಂಧಿಸಲಾಗಿದೆ. ಏಷಿಯಾದ ಐದು ರಾಷ್ಟ್ರಗಳಿಂದ ಮದುವೆ ಹೆಸರಲ್ಲಿ ಚೀನಾಗೆ ಯುವತಿಯರನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪವಿರುವುದಾಗಿ ಆಯೋಗ ಹೇಳಿದೆ.

ಗಡಿಯಾಚೆಗಿನ ಹೊಂದಾಣಿಕೆ ಸೇವೆಗಳು ಮಾನವ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ ಎಂದು ಪಾಕ್​ ರಾಜಧಾನಿ ಇಸ್ಲಮಾಬಾದ್​ನಲ್ಲಿರುವ ಚೀನಾದ ರಾಯಭಾರಿ ಕಚೇರಿಯು ಕೂಡ ಎಚ್ಚರಿಕೆ ನೀಡಿದೆ. ಅಕ್ರಮ ಹೊಂದಾಣಿಕೆ ಸೇವೆಗಳನ್ನು ಮುರಿದು ಹಾಕಲು ಚೀನಾ, ಪಾಕಿಸ್ತಾನದ ಕಾನೂನು ಸಂಸ್ಥೆಗಳಿಗೆ ಸಹಕಾರ ನೀಡಲಿದೆ ಎಂದು ಕಳೆದ ತಿಂಗಳು ಚೀನಾ ರಾಯಭಾರಿ ಕಚೇರಿ ತಿಳಿಸಿತ್ತು. ಜತೆಗೆ ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಅವರ ಅಂಗಾಂಗಳನ್ನು ಮಾರಾಟ ಮಾಡುತ್ತಾರೆ ಎಂಬ ಆರೋಪವನ್ನು ತಳ್ಳಿಹಾಕಿತ್ತು. (ಏಜೆನ್ಸೀಸ್​​)

Leave a Reply

Your email address will not be published. Required fields are marked *