More

  ಅಮೆರಿಕ ಮಡಗಿದ ಹಾಗಿರಲು ಪಾಕ್ ಪರದಾಟ

  ಅಮೆರಿಕ ಮಡಗಿದ ಹಾಗಿರಲು ಪಾಕ್ ಪರದಾಟಜನವರಿ 2022: ಪಾಕಿಸ್ತಾನ ಸೇನೆ ದೇಶದ ರಕ್ಷಣಾ ನೀತಿ ಕುರಿತಾದ ದಸ್ತಾವೇಜನ್ನು ಹೊರತಂದಿತು. ಭಾರತದೊಂದಿಗೆ ನೂರು ವರ್ಷಗಳವರೆಗೆ ಯುದ್ಧಕ್ಕಿಳಿಯದೆ ಶಾಂತಿಯಿಂದ ಇರುವುದು ಪಾಕಿಸ್ತಾನದ ನೀತಿ ಎಂದು ಅದರಲ್ಲಿ ದಾಖಲಿಸಲಾಯಿತು.

  ಜನವರಿ 2023: ‘ಭಾರತದೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿ ನಮಗೇನೂ ಉಪಯೋಗವಾಗಲಿಲ್ಲ. ಹೀಗಾಗಿ ಶಾಂತಿಯತ್ತ ಪ್ರಯತ್ನ ಆರಂಭಿಸುವುದು ನಮಗೆ ಮುಖ್ಯ’ ಎಂದು ಪಾಕ್ ಪ್ರಧಾನಿ ಶೆಹ್​ಬಾಜ್ ಶರೀಫ್ ದುಬೈನ ಅಲ್ ಅರಬಿಯಾ ವಾರ್ತಾಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಘೊಷಿಸಿದರು.

  ಮಾರ್ಚ್ 2024: ‘ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದರ ಬಗ್ಗೆ ನಾವು ಉತ್ಸುಕರಾಗಿದ್ದೇವೆ’ ಎಂದು ಪಾಕಿಸ್ತಾನದ ಹೊಸ ವಾಣಿಜ್ಯ ಮಂತ್ರಿ ಡಾ. ಗೋಹರ್ ಎಜಾಝå್ ದೊಡ್ಡದಾಗಿ ಘೊಷಿಸಿದರು.

  1947ರಲ್ಲಿ ನಮ್ಮಿಂದ ವಿಚ್ಛೇದನಗೊಂಡು ದೂರಹೋದ ಪಾಕಿಸ್ತಾನ ನಂತರ ತೆಪ್ಪಗೆ ದೂರವೇ ಉಳಿಯದೆ ನಮಗೇ ತಗುಲಿಕೊಂಡು ಕಳೆದ ಮುಕ್ಕಾಲು ಶತಮಾನದಿಂದಲೂ ನಮ್ಮ ಮಗ್ಗುಲ ಮುಳ್ಳಾಗಿಯೇ ಇರುವುದರಲ್ಲಿ ಸಾರ್ಥಕ್ಯ ಕಂಡು, ಈಗ ಇದ್ದಕ್ಕಿದ್ದಂತೆ ನಮಗೆ ಈ ಬಗೆಯ ‘ಪ್ರೇಮಸಂದೇಶ’ಗಳನ್ನು ಕಳುಹಿಸತೊಡಗಿದೆ. ಇದೇನು ಕಥೆ! ಇದು ನಮ್ಮಂತಹ ಸಾಮಾನ್ಯ ಭಾರತೀಯರ ಪ್ರಶ್ನೆಯಾದರೆ ನವದೆಹಲಿಯಲ್ಲಿ ಅಧಿಕಾರಸೂತ್ರ ಹಿಡಿದ ನಮ್ಮ ನಾಯಕರು ಇಸ್ಲಾಮಾಬಾದ್​ನ ಈ ಹೊಸ ವರಸೆಯನ್ನು ಬೇರೆ ಬಗೆಯಾಗಿಯೇ ನೋಡುತ್ತಿದ್ದಾರೆ. ಅವರ ಸಾರ್ವಜನಿಕ ಹೇಳಿಕೆಗಳಲ್ಲಿ ಪಾಕಿಸ್ತಾನಕ್ಕೆ ಸ್ಥಾನವೇ ಇಲ್ಲ! ಅಪರೂಪಕ್ಕೊಮ್ಮೆ ಆ ದೇಶದ ಬಗ್ಗೆ ಹೊರಡುವ ಪರೋಕ್ಷ ಮಾತುಗಳು ಚಾಟಿಯೇಟೇ ಆಗಿರುತ್ತವೆ. ಉದಾಹರಣೆಗೆ, ನಮ್ಮೊಂದಿಗೆ ಕನಿಷ್ಠ ನೂರುವರ್ಷಗಳ ಶಾಂತಿಯ ಬಗ್ಗೆ ಪಾಕ್ ಸೇನೆ ಮಾತಾಡಿದರೆ ನಮ್ಮ ರಕ್ಷಾ ಮಂತ್ರಿ ರಾಜನಾಥ್ ಸಿಂಗ್ 2022ರ ಅಕ್ಟೋಬರ್ 27ರಂದು ಶ್ರೀನಗರದಲ್ಲಿ ನಿಂತು ಹೇಳಿದರು- ‘ನಾವು ಉತ್ತರದತ್ತ ಮುಂದುವರಿಯುತ್ತೇವೆ! ಗಿಲ್ಗಿಟ್-ಬಾಲ್ಟಿಸ್ತಾನವನ್ನು ಮತ್ತೆ ನಮ್ಮ ವಶಕ್ಕೆ ತೆಗೆದುಕೊಳ್ಳುವುದು ನಮ್ಮ ಉದ್ದೇಶ’ ಎಂದು ಈ ಮೂಲಕ ಅವರು ಪಾಕ್ ಸೇನೆಗೆ ‘ಸಂದೇಶ’ ಕಳುಹಿಸಿದರು. ‘ಭಾರತದೊಂದಿಗೆ ಯುದ್ಧ ಬೇಡ, ಶಾಂತಿ ಬೇಕು’ ಎಂದು ಶೆಹ್​ಬಾಜ್ ಶರೀಫ್ ಜಗತ್ತಿಗೇ ಕೇಳುವಂತೆ ಹೇಳಿದರೆ ನಮ್ಮ ವಿದೇಶಮಂತ್ರಿ ಡಾ.ಎಸ್. ಜೈಶಂಕರ್ ಇದೇ ಮಾರ್ಚ್ 24ರಂದು, ‘ನೆರೆಹೊರೆಯ ವಿಷಯದಲ್ಲಿ ಭಾರತ ದುರದೃಷ್ಟಶಾಲಿ!’ ಎಂದು ಸಿಂಗಾಪುರದಲ್ಲಿ ಹೇಳಿ ಪಾಕಿಸ್ತಾನದ ಜತೆಗೆ ಚೀನಾದ ಮೂತಿಗೂ ತಿವಿದರು. ‘ಮತ್ತೆ, ಭಾರತದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳಬೇಕು, ಅದಾಗದಿದ್ದರೆ ನಾವು ಕೆಟ್ಟ ಹಾಗೇ’ ಎಂದು ಗೋಹರ್ ಎಜಾಝå್ ಗೋಳಾಡಿದರೆ ಇತ್ತ ಮತ್ತೆ ಜೈಶಂಕರ್ ಸೂರತ್​ನಲ್ಲಿ ಏಪ್ರಿಲ್ 1ರಂದು ಎಜಾಝå್ ಸಾಹೇಬರನ್ನು ಹೀಗೆ ಎಚ್ಚರಿಸಿದರು- ‘ಭಯೋತ್ಪಾದನೆ ಮತ್ತು ವ್ಯಾಪಾರ ವಹಿವಾಟು ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ!’

  ಪಾಕಿಸ್ತಾನದ ಶಾಂತಿಸಂದೇಶವನ್ನು ನಂಬದೆ, ಆ ದೇಶದ ಬಗ್ಗೆ ಪ್ರಸಕ್ತ ಭಾರತ ಸರ್ಕಾರ ಕಟುನೀತಿ ಅನುಸರಿಸುತ್ತಿರುವ ಬಗ್ಗೆ ನಿರಾಸೆಯಾಗುತ್ತಿರುವುದು ಪಾಕ್ ನಾಯಕರಿಗಷ್ಟೇ ಅಲ್ಲ, ಅಮೆರಿಕದ ಬೈಡೆನ್ ಸರ್ಕಾರಕ್ಕೂ ಸಹ! ಭಾರತದ ಈ ನಿಲುವಿನಿಂದಾಗಿ ತನ್ನೆಲ್ಲ ತಂತ್ರಗಳು ವಿಫಲವಾಗುತ್ತವೆಯೇ ಎನ್ನುವುದು ಡೊಡ್ಡಣ್ಣನ ಚಿಂತೆಯಾದರೆ, ನಾವು ಇನ್ನೆಷ್ಟು ಬಾಗಿದರೆ ಮೋದಿ ಅಣ್ಣ ಬಂದು ತಮ್ಮನ್ನು ಮೇಲೆತ್ತಬಹುದು ಎಂದು ಪಾಕಿಗಳು ತಿಳಿಯದೇ ಕಂಗಾಲಾಗುತ್ತಿದ್ದಾರೆ. ಈ ಸ್ಥಿತಿಗೆ ಭಾರತ-ಪಾಕಿಸ್ತಾನ ಸಂಬಂಧಗಳು ಮತ್ತು ಅಮೆರಿಕದ ಲೆಕ್ಕಾಚಾರಗಳು ಬಂದು ನಿಂತದ್ದು ಹೇಗೆ ಮತ್ತು ಏಕೆ?

  ಪಾಕಿಸ್ತಾನದಲ್ಲಿ ಹದಿನಾರನೆಯ ನ್ಯಾಷನಲ್ ಅಸೆಂಬ್ಲಿಯ ರಚನೆಗಾಗಿ 2023ರ ಜುಲೈ ತಿಂಗಳ ಅಂತ್ಯದಲ್ಲಿ ನಡೆಯಬೇಕಾಗಿದ್ದ ಸಾರ್ವತ್ರಿಕ ಚುನಾವಣೆಗಳು ಆರೇಳು ತಿಂಗಳುಗಳಿಗೂ ಹೆಚ್ಚಿನ ವಿಳಂಬದ ನಂತರ ಇದೇ ಫೆಬ್ರವರಿ 8ರಂದು ಜರುಗಿದವು. ಈ ವಿಳಂಬಕ್ಕೆ ಅಘೊಷಿತ ಆದರೆ ಸ್ಪಷ್ಟ ಕಾರಣವೆಂದರೆ ದೇಶದ ಜನಪ್ರಿಯ ರಾಜಕಾರಣಿ ಇಮ್ರಾನ್ ಖಾನ್ ನಿಯಾಜಿ ಅವರನ್ನು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ತಡೆಯಲು ‘ಕಾನೂನಾತ್ಮಕ ನೆಪ’ವೊಂದನ್ನು ರೂಪಿಸಬೇಕಾಗಿತ್ತು. ಆ ಯೋಜನೆಯಂತೆ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್​ನ ಆರ್ಥಿಕ ಅಪರಾಧಗಳ ನ್ಯಾಯಾಲಯ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ (ಪಿಂಕಿ ಪೀರ್​ನಿ) ಅವರನ್ನು ತೋಷಖಾನಾ ಅವ್ಯವಹಾರದಲ್ಲಿ ದೋಷಿಗಳೆಂದು ತೀರ್ವನಿಸಿ, ಅವರಿಬ್ಬರೂ ಹತ್ತು ವರ್ಷಗಳ ಕಾಲ ಯಾವುದೇ ಅಧಿಕಾರ ಸ್ಥಾನದಲ್ಲಿ ಕೂರದಂತೆ ನಿರ್ಬಂಧಿಸಿತು. ತೋಷಖಾನಾ ಅಂದರೆ ರಾಷ್ಟ್ರನಾಯಕರಿಗೆ ವಿದೇಶಿ ಗಣ್ಯರು ನೀಡುವ ಕೊಡುಗೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಕಚೇರಿ. ಇದು ಮೊಘಲ್ ಸಂಪ್ರದಾಯ. ತಮ್ಮ ದೇಶ ಮೊಘಲ್ ಸಾಮ್ರಾಜ್ಯದ ಉತ್ತರಾಧಿಕಾರಿ ಎಂದು ತಿಳಿದು ಹೆಮ್ಮೆ ಪಡುವುದು ಪಾಕಿಸ್ತಾನಿಯರ ಸ್ವಭಾವ. ಅದರಂತೆ ಪಾಕ್ ಅಧ್ಯಕ್ಷರು, ಪ್ರಧಾನಮಂತ್ರಿಗಳು, ವಿದೇಶ ಮಂತ್ರಿಗಳು ಮುಂತಾದವರಿಗೆ ಮತ್ತವರ ಪತ್ನಿ/ಪತಿಯರಿಗೆ ಅವರುಗಳು ವಿದೇಶಿ ಗಣ್ಯರಿಂದ ಪಡೆದುಕೊಳ್ಳುವ ಯಾವುದೇ ಕೊಡುಗೆಗಳ ಮೇಲೆ ಸ್ವಂತ ಹಕ್ಕಿರುವುದಿಲ್ಲ. ಮುಖವನ್ನು ಅರಳಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟು ಕಾಣಿಕೆಗಳನ್ನು ಪಡೆದುಕೊಂಡ ಮೇಲೆ ಅದನ್ನು ತೆಪ್ಪಗೆ ತೋಷಖಾನಾಗೆ ಒಪ್ಪಿಸಿಬಿಡಬೇಕು (ಅಯ್ಯೋ ಪಾಪ!). ಆದರೆ ಅವರೂ ಮನುಷ್ಯರಲ್ಲವೇ? ಯಾವುದಾದರೂ ಕೊಡುಗೆ ಮೇಲೆ ಆಸೆಯಾದರೆ ಅದರ ಬೆಲೆಯನ್ನು ಸರ್ಕಾರಕ್ಕೆ ಪಾವತಿಸಿ ತಮ್ಮದಾಗಿಸಿಕೊಳ್ಳಬಹುದು! (ಹೀಗೂ ಉಂಟೇ!) ಇಮ್ರಾನ್ ಖಾನ್ ಅವರೂ ಸಹ ಹೀಗೇ ಮಾಡಿದರು. ಅದರಲ್ಲೇನೂ ತಪ್ಪಿಲ್ಲ. ಆದರೆ ಖಾನ್ ಮತ್ತು ಬೀಬೀ ಮೇಲೆ ಹೊರಿಸಲಾದ ಆಪಾದನೆಯೆಂದರೆ ಅಂತಹ ಬೆಲೆಬಾಳುವ ಕೊಡುಗೆಗಳನ್ನು ಕಡಿಮೆ ಬೆಲೆ ಪಾವತಿಸಿ ತಮ್ಮದಾಗಿಸಿಕೊಂಡ ನಂತರ ಈ ದಂಪತಿ ಅವುಗಳನ್ನು ‘ಭಾರಿ’ ಬೆಲೆಗೆ ಬೇರೆಯವರಿಗೆ ಮಾರಿ ಹಣ ಮಾಡಿಕೊಂಡರು ಎಂದು. ಆ ಪ್ರಕಾರ ಆರ್ಥಿಕ ಅಪರಾಧಗಳ ನ್ಯಾಯಾಲಯ ಇಮ್ರಾನ್ ಖಾನ್ ಅವರನ್ನು ದೋಷಿಯೆಂದು ತೀರ್ವನಿಸಿ ಜೈಲಿಗಟ್ಟಿ, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ತಡೆಯಿತು.

  ಇಷ್ಟಾಗಿಯೂ, ಇಮ್ರಾನ್ ಖಾನ್ ಅವರ ಜನಪ್ರಿಯತೆಯಿಂದಾಗಿಯೇ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ (ಪಿಟಿಐ) ಚುನಾವಣೆಗಲ್ಲಿ ಜಯಗಳಿಸಿ ಅಧಿಕಾರಕ್ಕೆ ಬರುತ್ತದೆ, ಆ ಮೂಲಕ ಇಮ್ರಾನ್ ಖಾನ್ ಪರೋಕ್ಷವಾಗಿ ಅಧಿಕಾರ ಚಲಾಯಿಸಬಹುದು. ಅಂದರೆ ತಮ್ಮ ನೀತಿಗಳನ್ನು ಅನುಷ್ಠಾನಕ್ಕೆ ತರಬಹುದು ಎಂಬುದನ್ನು ಮನಗಂಡ ಚುನಾವಣಾ ಆಯೋಗ ಪಿಟಿಐ ಅನ್ನೇ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಪ್ರತಿಬಂಧಿಸಿತು. ಹೀಗಾಗಿ ಪಿಟಿಐ ಸದಸ್ಯರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾಯಿತು. ಇದೆಲ್ಲವನ್ನೂ ಚುನಾವಣಾ ಆಯೋಗದಿಂದ ಮಾಡಿಸಿದ್ದು ಪಾಕ್ ಸೇನೆ. ಅದರ ಹಿಂದಿದ್ದದ್ದು ಅಮೆರಿಕ. ಯಾಕೆಂದರೆ ಅವೆರಡಕ್ಕೂ ಇಮ್ರಾನ್ ಖಾನ್ ಬೇಕಿರಲಿಲ್ಲ. ತಮ್ಮ ಮಾತು ಕೇಳುವ ಶೆಹ್​ಬಾಜ್ ಶರೀಫ್ ಅವರೇ ಪ್ರಧಾನಮಂತ್ರಿಗಳಾಗಿ ಕೂತು ತಮ್ಮ ಆದೇಶಗಳಿಗನುಗುಣವಾಗಿ ಆಡಳಿತ ನಡೆಸಬೇಕೆಂದು ಆ ಒಳಗಿನ ಮತ್ತು ಹೊರಗಿನ ಶಕ್ತಿಗಳೆರಡೂ ತಂತ್ರ ಹೂಡಿದ್ದವು.

  ಇಷ್ಟಾಗಿಯೂ ಫೆಬ್ರವರಿ 8ರಂದು ನಡೆದ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಪಿಟಿಐ ಸದಸ್ಯರೇ ಬಹುಮತ ಪಡೆಯುವ ಸೂಚನೆ ಕಂಡಾಗ ಕೊನೇ ಹಂತದಲ್ಲಿ ಸೋಲು ಒಪ್ಪಿಕೊಳ್ಳಲು ತಯಾರಿಲ್ಲದ ಸೇನೆ ಮತ್ತು ಅದರ ಹಿಂದಿದ್ದ ಅಮೆರಿಕ ಇನ್ನಷ್ಟು ಕುತಂತ್ರ ನಡೆಸಿ ಪಿಟಿಐ ಗುಂಪು ಬಹುಮತದ ಗಡಿ ದಾಟದಂತೆ ನೋಡಿಕೊಂಡವು ಮತ್ತು ಒಂದಿಡೀ ತಿಂಗಳ ಕಸರತ್ತು ನಡೆಸಿ ಮಿಂಯಾ ಮೊಹಮ್ಮದ್ ಶೆಹ್​ಬಾಜ್ ಶರೀಫ್​ರ ನೇತೃತ್ವದ ಸರ್ಕಾರವನ್ನು ಮಾರ್ಚ್ 11ರಂದು ಅಸ್ತಿತ್ವಕ್ಕೆ ತರುವುದರಲ್ಲಿ ಯಶಸ್ವಿಯಾದವು. ಈ ಹಾದಿಯಲ್ಲಿ ಅವು ನಿವಾರಿಸಿಕೊಂಡದ್ದು, ‘ನಾನೇ ಪ್ರಧಾನಮಂತ್ರಿ’ ಎಂದು ಬೀಗುತ್ತಿದ್ದ ನವಾಜ್ ಶರೀಫ್​ರನ್ನು ದೂರ ನಿಲ್ಲಿಸಿದ್ದು. ಅಷ್ಟೇ ಅಲ್ಲ, ಮಾಜಿ ವಿದೇಶಾಂಗ ಮಂತ್ರಿ ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಬಿಲಾವಲ್ ಭುಟ್ಟೋ ಮತ್ತೆ ವಿದೇಶ ಮಂತ್ರಾಲಯದ ಕಾರ್ಯಭಾರ ವಹಿಸಿಕೊಳ್ಳದಂತೆ ವ್ಯವಸ್ಥೆಯೂ ಆಯಿತು. ಎಳಸು ಬಿಲಾವಲ್​ರ ಅನುಭವಿ ತಂದೆ ಹಾಗೂ ಭಾರತದ ಬಗ್ಗೆ ಹಿಂದೆ ಸದ್ಭಾವನೆ ತೋರಿದ್ದ ಆಸಿಫ್ ಆಲಿ ಜರ್ದಾರಿ ಅವರನ್ನು ವಾರದೊಳಗೆ ಮಾರ್ಚ್ 17ರಂದು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಲಾಯಿತು. ಇದೆಲ್ಲವೂ ಆದದ್ದು ಅಮೆರಿಕದ ಭೂ-ರಾಜಕೀಯ ಲೆಕ್ಕಾಚಾರಗಳು ಮತ್ತದಕ್ಕೆ ಬಲಹೀನ ಪಾಕ್ ಸೇನೆಯ ಅನಿವಾರ್ಯ ಸಹಕಾರದೊಂದಿಗೆ.

  ಪ್ರಸಕ್ತ ಜಾಗತಿಕ ರಾಜಕಾರಣ, ಭೂ-ರಾಜಕೀಯ ಹಾಗೂ ಭೂ-ಸಾಮರಿಕ ಸನ್ನಿವೇಶದಲ್ಲಿ ಚೀನಾವನ್ನು ಪಾಕಿಸ್ತಾನದಿಂದ ಹೊರಗಿಡುವುದು ಮತ್ತು ಆ ಮೂಲಕ ಹಿಂದೂ ಮಹಾಸಾಗರದಲ್ಲಿ ಚೀನಾದ ಹಾಜರಿಯನ್ನು ಎಷ್ಟು ಸಾಧ್ಯವೋ ಅಷ್ಟು ಬಲಹೀನಗೊಳಿಸುವುದು ಅಮೆರಿಕದ ನೀತಿ. ಇದನ್ನು ಸಾಧಿಸುವ ಅತ್ಯುತ್ತಮ ಮಾರ್ಗವೆಂದರೆ ಪಾಕಿಸ್ತಾನವನ್ನು ಭಾರತಕ್ಕೆ ಹತ್ತಿರವಾಗಿಸಿಬಿಡುವುದು ಒಳ್ಳೆಯ ತಂತ್ರ ಎನ್ನುವುದನ್ನೂ ಬೈಡೆನ್ ಸರ್ಕಾರ ಅರಿತುಕೊಂಡದ್ದೊಂದು ವಿಶೇಷ ಬೆಳವಣಿಗೆ. ಈ ಹೊಸ ಅರಿವಿಗನುಗುಣವಾಗಿ ರೂಪಿತವಾದ ಕಾರ್ಯಯೋಜನೆಯಲ್ಲಿ ಇಮ್ರಾನ್ ಖಾನ್​ರಿಗೆ ಸ್ಥಾನವಿರಲಿಲ್ಲ. 2018ರ ಆಗಸ್ಟ್​ನಲ್ಲಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಹಗುರವಾಗಿ ಮಾತಾಡಿದ ಇಮ್ರಾನ್ ಖಾನ್ ವರ್ಷ ಕಳೆಯುತ್ತಿದ್ದಂತೆ 2019ರ ಆಗಸ್ಟ್​ನಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ಭಾರತ ರದ್ದುಗೊಳಿಸಿದಾಗ ವ್ಯಗ್ರಗೊಂಡು ಈ ದೇಶದ ಜತೆಗೆ ತಮ್ಮ ದೇಶದ ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡರು. ‘ತಲೆ ಕೆಟ್ಟಿದೆಯಾ?’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರು ಮುಖದ ನೀರಿಳಿಸಿದಾಗ, ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಆಮದಿಗೆ ರಿಯಾಯಿತಿ ನೀಡಿದರು ಎನ್ನುವುದು ಬೇರೆ ವಿಷಯ ಬಿಡಿ. ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜಯವನ್ನು ಕೊಂಡಾಡಿದ್ದಲ್ಲದೆ ರಷ್ಯಾ ಜತೆ ಸರಸವನ್ನೂ ಆರಂಭಿಸಿದರು. ಆಗ ಅವರನ್ನು ಕೆಳಗಿಳಿಸುವುದು ಬೈಡೆನ್ ಸರ್ಕಾರದ ಹಂಚಿಕೆಯಾಯಿತು. ಅಷ್ಟರಲ್ಲಾಗಲೆ, ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ ಸೇನೆಯ ವಿರುದ್ಧವೇ ಬಾಲ ಬಿಚ್ಚಿದ ಪ್ರಧಾನಿ ಖಾನ್ ಸೇನಾ ಮುಖ್ಯಸ್ಥ ಜ. ಕಮರ್ ಜಾವೇದ್ ಬಾಜ್ವಾರ ಕೆಂಗಣ್ಣಿಗೂ ಗುರಿಯಾಗಿದ್ದರು. ಹೀಗಾಗಿ ಅಮೆರಿಕದ ಜತೆ ಘನಿಷ್ಠ ಸಂಬಂಧ ಹೊಂದಿದ್ದ ಸೇನಾವರಿಷ್ಠರು ಆ ದೊಡ್ಡಣ್ಣನ ನಿರ್ದೇಶನಕ್ಕನುಗುಣವಾಗಿ ಇಮ್ರಾನ್ ಖಾನ್​ರನ್ನು ಕುರ್ಚಿಯಿಂದ ದೂಡಿ, ಒಂದು ತಪರಾಕಿಯನ್ನೂ ಕೊಟ್ಟು ಮೂಲೆಗುಂಪಾಗಿಸಿದರು.

  ಅಷ್ಟಾಗಿಯೂ, ಆ ಮಾಜಿ ಕ್ರಿಕೆಟಿಗನ ಭಾರತ-ವಿರೋಧಿ ನೀತಿ ಆ ದಿನಗಳಲ್ಲಿ ಬೈಡೆನ್ ಸರ್ಕಾರಕ್ಕೆ ಮುಖ್ಯವೆನಿಸಿರಲಿಲ್ಲ. ಅದು ಬದಲಾಗತೊಡಗಿದ್ದು ಶೀತಲಸಮರದ ಪಳಯುಳಿಕೆಗಳಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್​ಗೆ ಇಂದಿನ ಜಗತ್ತು ಹೇಗಿದೆ ಎನ್ನುವ ಬಗ್ಗೆ ತಡವಾಗಿಯಾದರೂ ತಿಳಿವಳಿಕೆ ಮೂಡತೊಡಗಿದಾಗ. ಇಂಡೋ-ಪೆಸಿಫಿಕ್ ವಲಯದಲ್ಲಿ ಹದ್ದುಮೀರದಂತೆ ಚೀನಾವನ್ನು ಕಟ್ಟಿಹಾಕುವುದು ಮುಖ್ಯ, ಅದಕ್ಕಾಗಿ ಭಾರತದ ಸಹಕಾರ ಅತಿ ಮುಖ್ಯ ಎಂಬ ಡೊನಾಲ್ಡ್ ಟ್ರಂಪ್ ಮತ್ತು ಮೈಕ್ ಪಾಂಪಿಯೋ ಅವರುಗಳ ನೀತಿಯ ವ್ಯಾವಹಾರಿಕತೆಯನ್ನು ತಡವಾಗಿಯಾದರೂ ಗುರುತಿಸಿದ ಬ್ಲಿಂಕನ್ ತಡವಾಗಿ ನಿದ್ದೆಯಿಂದ ಎದ್ದವರಂತೆ ಗಡಬಡಿಸಿ ಭಾರತದ ರಾಜತಾಂತ್ರಿಕ ಹಾಗೂ ಸೇನಾಶಕ್ತಿಯನ್ನು ವೃದ್ಧಿಸಲು ಯೋಜನೆಗಳನ್ನು ರೂಪಿಸತೊಡಗಿದರು.

  ಯೂಕ್ರೇನ್ ಮೇಲಿನ ದಾಳಿಯಿಂದಾಗಿ ಆರ್ಥಿಕ ದಿಗ್ಬಂಧನಗಳಿಗೆ ಒಳಗಾದ ರಷ್ಯಾದಿಂದ ತೈಲ ಆಮದು ಕುರಿತಂತೆ ಭಾರತಕ್ಕೆ ವಿನಾಯಿತಿ ನೀಡಿದ್ದಲ್ಲದೆ, ಚೀನಾ ವಿರುದ್ಧ ಭಾರತದ ಪರವಾಗಿ ಹೇಳಿಕೆಗಳು ವಾಷಿಂಗ್​ಟನ್​ನಿಂದ ಹೊರಡತೊಡಗಿದವು. ಜತೆಗೆ, ಕ್ರಿಸ್ಟಲ್ ಬ್ಲೇಡ್ ಯುದ್ಧವಿಮಾನ ಇಂಜಿನ್ ತಂತ್ರಜ್ಞಾನ, ಎಂಕ್ಯೂ9 ಡ್ರೋನ್​ಗಳೂ ಸೇರಿ ಹಲವಾರು ಅತ್ಯಾಧುನಿಕ ಸೇನಾ ಸವಲತ್ತುಗಳನ್ನು ಭಾರತಕ್ಕೆ ಒದಗಿಸುವ ಬಗ್ಗೆ ಶ್ವೇತಭವನದಲ್ಲಿ ಸಹಮತಿ ವ್ಯಕ್ತವಾಗತೊಡಗಿತು.

  ಇಷ್ಟೆಲ್ಲ ಆದರೂ, ಭಾರತದ ರಕ್ಷಣಾ ಪಡೆಗಳು ಪಾಕಿಸ್ತಾನಿ ಗಡಿಯಲ್ಲೇ ನಿಂತರೆ ಚೀನಾ ವಿರುದ್ಧ ಭಾರತದ ಹೋರಾಟ ಸಾಮರ್ಥ್ಯ ಅಷ್ಟರಮಟ್ಟಿಗೆ ಕುಗ್ಗುತ್ತದೆಂದು ಗುರುತಿಸಿದ ವಾಷಿಂಗ್​ಟನ್​ನ ಡೆಮೋಕ್ರಾಟಿಕ್ (ಎಡವಟ್ಟು) ಮಹಾಜ್ಞಾನಿಗಳು ಕಂಗೆಟ್ಟರೂ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ವೈಮನಸ್ಯವನ್ನು ಕಡಿಮೆಗೊಳಿಸುವುದೇ ಸಮಸ್ಯೆಗೆ ಸೂಕ್ತ ಪರಿಹಾರ ಎಂದು ಕೊನೆಗೂ ಅರಿತುಕೊಂಡರು. ಅದಕ್ಕೆ ಅವರಿಗೆ ಇಸ್ಲಾಮಾಬಾದ್​ನಲ್ಲಿ ಸೂಕ್ತ ಕೈಗೊಂಬೆ ಬೇಕಾಗಿತ್ತು. ಆ ಸ್ಥಾನಕ್ಕೆ ಸೂಕ್ತವೆನಿಸಿದ್ದು ಅದಾಗಲೇ ಆರ್ಥಿಕ ಲಾಭಕ್ಕಾಗಿ ಅಮೆರಿಕ ಮತ್ತು ಬ್ರಿಟನ್​ನ ಮಾತು ಕೇಳಿ ಯೂಕ್ರೇನ್​ಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಶೆಹ್​ಬಾಜ್ ಶರೀಫ್ ಇಂದು ಐಎಂಎಫ್ ಸಾಲಕ್ಕಾಗಿ ಏನು ಮಾಡಲೂ ತಯಾರಿರುವುದು ಅಮೆರಿಕಗೆ ಗೊತ್ತು. ಈ ಹಿನ್ನೆಲೆಯಲ್ಲಿ ಶೆಹ್​ಬಾಜ್ ಶರೀಫ್ ಸರ್ಕಾರ ಮತ್ತು ಪಾಕ್ ಸೇನೆ ತಮ್ಮ ಆದೇಶಕ್ಕನುಗುಣವಾಗಿ ಭಾರತದ ಮುಂದೆ ಬಾಗಲು ತಯಾರಿವೆ ಎಂದು ಬೈಡೆನ್ ಸರ್ಕಾರ ತಿಳಿಯುವುದು ಸಹಜವೇ. ಹೀಗಾಗಿಯೇ ಅದು ಭಾರತದ ಜತೆ ಸ್ನೇಹ ಬಯಸುವ ಸರ್ಕಾರವನ್ನು ಇಸ್ಲಾಮಾಬಾದ್​ನಲ್ಲಿ ಅಸ್ತಿತ್ವಕ್ಕೆ ತಂದದ್ದು, ಹಾಗೆ ಮಾಡುವಂತೆ ಪಾಕ್ ಸೇನೆಯ ಮೇಲೆ ಒತ್ತಡ ಹಾಕಿದ್ದು. ಇದರೊಂದಿಗೆ ದಕ್ಷಿಣ ಏಷ್ಯಾದಲ್ಲಿ ಮಹತ್ತರ ರಾಜಕೀಯ ಹಾಗೂ ಸೇನಾ ನಾಟಕವೊಂದಕ್ಕೆ ರಂಗಸಜ್ಜಿಕೆ ಸರಿಸುಮಾರು ಪೂರ್ಣಗೊಂಡಿದೆ. ನಾಟಕದ ಚಿತ್ರಕಥೆಯತ್ತ ಒಂದು ಇಣುಕುನೋಟವನ್ನು ಮುಂದಿನವಾರ ಬೀರೋಣ.

  (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

  ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ..!ಫೋಟೋಗಳು ಇಲ್ಲಿವೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts