More

    ಬೇರೆ ದೇಶಗಳಲ್ಲೂ ಹಿಂದೂಗಳಿಗೆ ಬದುಕಲು ಬಿಡದ ಪಾಕಿಸ್ತಾನ; ಹಿಂದೆ ಕಾಶ್ಮೀರ ಆಯ್ತು, ಈಗ ಫಿಜಿಯಲ್ಲೂ ಪಾಕ್​ ಕಳ್ಳಾಟ!

    ನವದೆಹಲಿ: ಪಾಕಿಸ್ತಾನದ ಭಾರತ ಮತ್ತು ಹಿಂದು ದ್ವೇಷ ಇಡೀ ಜಗತ್ತಿಗೆ ಗೊತ್ತಿರುವ ಬಹಿರಂಗ ಸತ್ಯ. ಈ ಹಿಂದೆ ಕಾಶ್ಮೀರದಲ್ಲಿ ಅಶಾಂತಿ ನಿರ್ಮಿಸಿ ಪಂಡಿತರನ್ನು ಓಡಿಸುವಲ್ಲಿ ಪಾಕ್​ ಪ್ರಮುಖ ಪಾತ್ರ ವಹಿಸಿತ್ತು. ಅನೇಕ ಘಟನೆಗಳಲ್ಲಿ ಕಾಶ್ಮೀರದ ರಾಜಕೀಯ ಪಾಕಿಸ್ತಾನದಿಂದ ಪ್ರಭಾವಿತವಾಗಿತ್ತು. ಈಗ ಪಾಕಿಸ್ತಾನದ ಕಳ್ಳಾಟ ಭಾರತದಲ್ಲಿ ಮಾತ್ರವಲ್ಲ ಫಿಜಿ ಎನ್ನುವ ಸಣ್ಣ ದೇಶದಲ್ಲೂ ನಡೆಯುತ್ತಿದೆ.

    ಫಿಜಿ ಎನ್ನುವುದು ದಕ್ಷಿಣ ಪೆಸಿಫಿಕ್​ ಸಾಗರದಲ್ಲಿರುವ ಪುಟ್ಟ ದೇಶ. ಇದು ಹಿಂದೆ ಭಾರತದಂತೆಯೇ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತ್ತು. ಈಗ ಅದು ಸ್ವತಂತ್ರ ರಾಷ್ಟ್ರ. ವಿಶೇಷವೆಂದರೆ ಅಲ್ಲಿನ ಜನಸಂಖ್ಯೆಯಲ್ಲಿ ಶೇಕಡಾ 27.9 ಹಿಂದುಗಳೇ ಇದ್ದಾರೆ. ಈಗ ಅಲ್ಲಿ ಆದ ಸಮಸ್ಯೆ ಏನು ಅಂತೀರಾ? ಅಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅನಾಚಾರ ನಡೆಯುತ್ತಿದೆ. ಪೂರ್ವಗ್ರಹ ಪೀಡಿತ ನಿರ್ಧಾರಗಳಿಂದಾಗಿ ಅಲ್ಪಸಂಖ್ಯಾತ ಹಿಂದೂಗಳು ಸಮಸ್ಯೆ ಎದುರಿಸುತ್ತಿದ್ದಾರೆ.

    ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆಗೆ ಅಲ್ಲಿನ ವಿತ್ತ, ನಾಗರಿಕ ಸೇವಾ ಹಾಗೂ ಸಂವಹನ ಸಚಿವ ಅಯಾಝ್​ ಸೈಯದ್​ ಖಾಯುಮ್​ ಕಾರಣ ಎಂಬ ಆರೋಪ ಕೇಳಿಬಂದಿದೆ. ಖಾಯುಮ್​ಗೆ ಪಾಕಿಸ್ತಾನದ ಗುಪ್ತಚರ ದಳ ಐಎಸ್​ಐ ಜೊತೆ ಒಳ್ಳೆಯ ಸಂಬಂಧ ಇದೆ ಎಂದು ಹೇಳಲಾಗುತ್ತಿದೆ.

    2016ರಲ್ಲಿ ಪಾಕಿಸ್ತಾನದ NADRA (National Database and Registration Authority) ಫಿಜಿಯ ಚುನಾವಣೆಗೆ ಸಂಬಂಧಪಟ್ಟ ಎಲೆಕ್ಷನ್​ ಮ್ಯಾನೇಜ್​ಮೆಂಟ್​ ಸಿಸ್ಟಂ ಅನ್ನು ತಯಾರಿಸಿತ್ತು. ಫಿಜಿಯಲ್ಲಿ 2018ರ ಚುನಾವಣೆಗಳನ್ನು ನಡೆಸಲು NADRA ಸಹಾಯ ಪಡೆಯಲಾಗಿತ್ತು. ಆದರೆ 2017ರಲ್ಲಿ ಪಾಕಿಸ್ತಾನದ ಚುನಾವಣೆಯಲ್ಲಿ NADRA ತನ್ನ ಪ್ರಭಾವ ಬೀರಿ ಫಲಿತಾಂಶವನ್ನು ಬದಲಾಯಿಸಿತ್ತು. ವರದಿಗಳ ಪ್ರಕಾರ NADRA ಭಯೋತ್ಪಾದಕರಿಗೂ ಗುರುತಿನ ಚೀಟಿ ನೀಡಿತ್ತು. ಇದಾದ ಮೇಲೂ ಫಿಜಿ ಚುನಾವಣೆ ನಿರ್ವಹಣೆಗೆ ಪಾಕಿಸ್ತಾನದ ನೆರವು ಪಡೆದಿತ್ತು.

    ಫಿಜಿಯ ಪ್ರಧಾನಿ ಬೈನಿಯಮರಮಗೆ ಗೆಲ್ಲುವುದೇ ಮುಖ್ಯವಾಗಿತ್ತು. ಪಾಕ್​ ಜತೆ ಉತ್ತಮ ಸಂಬಂಧ ಹೊಂದಿರುವ ವಿತ್ತ ಸಚಿವ ಖಾಯುಮ್​ಗೆ ಗೆಲುವಿನ ಬದಲಾಗಿ ಮನಸ್ಸಿಗೆ ಬಂದಂತೆ ಆಡಳಿತ ನಡೆಸಲು ಅವಕಾಶ ನೀಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಬೈನಿಯಮರಮ ಚುನಾವಣೆಯಲ್ಲಿ ಗೆದ್ದ ನಂತರ ಫಿಜಿಯಲ್ಲಿರುವ ಹಿಂದು ದೇವಸ್ಥಾನಗಳ ಮೇಲೆ ದಾಳಿ ಹೆಚ್ಚಾಗಿದೆ. ಅದಷ್ಟೇ ಅಲ್ಲದೆ ಹಿಂದು ಚಿಂತಕರನ್ನು ಪೊಲೀಸರು ಅನಗತ್ಯವಾಗಿ ಹಿಡಿದು ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆ.

    ಖಾಯುಮ್‌ ಪ್ರಭಾವದಿಂದ ರಿಸರ್ವ್ ಬ್ಯಾಂಕ್, ಬ್ರಾಡ್‌ಕಾಸ್ಟಿಂಗ್ ಕಮಿಷನ್, ಗುಪ್ತಚರ ಘಟಕ, ಅಪಘಾತ ಮತ್ತು ಪರಿಹಾರ ಆಯೋಗ, ಚುನಾವಣಾ ಮೇಲ್ವಿಚಾರಕ, ವ್ಯಾಪಾರ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಸ್ಥಾನಗಳಿಗೆ ಮುಸಲ್ಮಾನರನ್ನು ನೇಮಿಸಲಾಗಿದೆ. ವಿಚಿತ್ರವೆಂದರೆ ಫಿಜಿಯಲ್ಲಿ ಮುಸಲ್ಮಾನರ ಒಟ್ಟು ಜನಸಂಖ್ಯೆ ಶೇಕಡಾ 6 ಮಾತ್ರ. ಖಾಯುಮ್ ಚಿಕ್ಕಮ್ಮ ನೂರ್ ಬಾನೋ ಅಲಿ, ಫಿಜಿ ಚೇಂಬರ್ ಆಫ್ ಕಾಮರ್ಸ್ ಅನ್ನು ನಿಯಂತ್ರಿಸುತ್ತಾರೆ. ಅದಲ್ಲದೇ ಅವರು ಫಿಜಿಯ ಮಹಿಳೆಯರ ವ್ಯಾಪಾರ ಒಕ್ಕೂಟದ ಅಧ್ಯಕ್ಷೆಯೂ ಹೌದು.

    ಫಿಜಿಯಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ವಿವರ:

    ಜೂನ್​ 2016: ಲೌಟೋಕಾದಲ್ಲಿನ ಹಿಂದೂ ದೇವಾಲಯದ ಮೇಲೆ ದಾಳಿ, ಹಿಂದೂ ಚಿಹ್ನೆಗಳನ್ನು ಅಪವಿತ್ರಗೊಳಿಸಿದ್ದು ಸ್ಥಳೀಯ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದ್ವೇಷದ ಬರಹವನ್ನು ಬರೆಯಲಾಗಿತ್ತು.

    ಡಿಸೆಂಬರ್​ 2017: ನದಿ ಎನ್ನುವ ಸ್ಥಳದಲ್ಲಿ ಹಿಂದುಗಳ ತೀರ್ಥಧಾಮದ ಮೇಲೆ ದಾಳಿ, ಕಾಣಿಕೆ ಹುಂಡಿಯ ಕಳ್ಳತನ ಮತ್ತು ದೇವ-ದೇವತೆಗಳ ಮೂರ್ತಿಯನ್ನು ವಿರೂಪಗೊಳಿಸಿದ್ದು.

    ಜನವರಿ 2018: ಸುವಾ ಎನ್ನುವ ಸ್ಥಳದ ಬಳಿಯ ದೇವಸ್ಥಾನದ ಮೇಲೆ ದಾಳಿ ಮತ್ತು ವಿರೂಪಗೊಳಿಸಿದ್ದು.

    ಜುಲೈ 2019: ಮಲೊಲೊ ಎನ್ನುವಲ್ಲಿ ಸೀತಾ ಮಂದಿರದಿಂದ ಕಳ್ಳತನ

    ಅಗಸ್ಟ್ 2019: ಲೌಟೋಕಾದಲ್ಲಿ ಕಾಳಿಯಮ್ಮನ್​ ದೇವಸ್ಥಾನದ ಕಿಟಕಿ ಬಾಗಿಲುಗಳನ್ನು ಒಡೆದು ಹಾಕಿದ್ದು.

    ಸೆಪ್ಟೆಂಬರ್​ 2019: ಫಿಜಿಯ ಸುವಾ ಎನ್ನುವಲ್ಲಿ ದೇವಸ್ಥಾನದ ಮೇಲೆ ದಾಳಿ

    ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ನಡುವೆ ಫಿಜಿಯ ಮೆಥಡಿಸ್ಟ್​ ಚರ್ಚ್​ ಕೂಡ ಇಡಿ ದೇಶವನ್ನು ಕ್ರೈಸ್ತ ದೇಶ ಮಾಡಬೇಕು ಎಂದು ನಿರ್ಧರಿಸಿದೆ ಎನ್ನಲಾಗಿದೆ. ಕೋಮು ಸಂಘರ್ಷದ ಬಗ್ಗೆ ಹಿಂದು ಪೋಸ್ಟ್​ ಎನ್ನುವ ಪತ್ರಿಕೆ ಲೇಖನ ಬರೆದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಬೈನಿಯಮರಮ ‘ನನ್ನ ನೇತೃತ್ವದ ಫಿಜಿ ಯಾವುದೇ ಧರ್ಮದ ವಿರುದ್ಧದ ದ್ವೇಷವನ್ನು ಸಹಿಸುವುದಿಲ್ಲ. ಫಿಜಿಯಲ್ಲಿ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಮುಸ್ಲಿಮರು ಎಲ್ಲರೂ ಎಲ್ಲರನ್ನೂ ಪ್ರೀತಿಸುತ್ತಾರೆ. ಅದು ನಮ್ಮ ಸಂವಿಧಾನ ಒದಗಿಸಿದ ಭದ್ರತೆ. ಈ ವರದಿ ಸುಳ್ಳು ಎಂದು ಗೊತ್ತಿದ್ದರೂ ಯಾವುದೇ ರಾಜಕಾರಣಿ ಇದನ್ನು ವಿರೋಧಿಸಿಲ್ಲ ಎನ್ನುವುದು ಖೇದಕರ’ ಎಂದು ಹೇಳಿದ್ದಾರೆ.

    ಫಿಜಿಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ಮಾತ್ರ ಸ್ಪಷ್ಟ. ಪೆಸಿಫಿಕ್​ ಸಾಗರ ವಿಶ್ವ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿರುವ ವ್ಯಾಪಾರಿ ಮಾರ್ಗ. ಅಲ್ಲಿ ಪಾಕಿಸ್ತಾನಕ್ಕೆ ಆಸಕ್ತಿ ಇಲ್ಲ ಎನ್ನುವುದನ್ನು ಯಾರೂ ನಂಬಲಾರರು. ಈಗ ಪಾಕಿಸ್ತಾನ ಫಿಜಿಯನ್ನು ಇನ್ನೊಂದು ಅಫ್ಘಾನಿಸ್ತಾನವಾಗಿಸಿ ಕೈಗೊಂಬೆ ಮಾಡುತ್ತಾ ಎನ್ನುವುದು ಕುತೂಹಲದ ಪ್ರಶ್ನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts