ಪಾಕ್ ದೇಗುಲ ಜೀಣೋದ್ಧಾರಕ್ಕೆ ಇಮ್ರಾನ್ ಖಾನ್ ನಿರ್ಧಾರ: 400 ದೇವಾಲಯಗಳಿಗೆ ಕಾಯಕಲ್ಪ

ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಿದ್ಧ ಎಂದು ಪದೇಪದೆ ಹೇಳುತ್ತಿರುವ ಪಾಕಿಸ್ತಾನ ಈಗ ಹೊಸ ದಾಳ ಉರುಳಿಸಿದೆ. ನರೇಂದ್ರ ಮೋದಿ ಪ್ರಧಾನಿಯಾದರೆ ಶಾಂತಿ ಮಾತುಕತೆಗೆ ಅನುಕೂಲವಾಗುತ್ತದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಈಗ ಅಲ್ಲಿನ 400ಕ್ಕೂ ಅಧಿಕ ದೇವಾಲಯಗಳನ್ನು ಜೀಣೋದ್ಧಾರ ಮಾಡಲು ಮುಂದಾಗಿದ್ದಾರೆ! ಪಾಕ್ ಪರ ಭಾರತ ಮೃದು ಧೋರಣೆ ತಳೆಯುವಂತೆ ಮಾಡುವುದು ಇದರ ಉದ್ದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಿಯಾಲ್​ಕೋಟ್ ಮತ್ತು ಪೇಶಾವರದಲ್ಲಿರುವ ಐತಿ ಹಾಸಿಕ ದೇವಾಲಯಗಳಿಂದ ಜೀಣೋದ್ಧಾರ ಪ್ರಕ್ರಿಯೆ ಆರಂಭವಾಗಲಿದೆ. ಸಿಯಾಲ್​ಕೋಟ್​ನ ಜಗನ್ನಾಥ ದೇವಾಲಯ ಮತ್ತು 1000 ವರ್ಷಗಳಷ್ಟು ಪುರಾತನವಾದ ಶಿವಾಲಯದ ಜೀಣೋ ದ್ಧಾರಕ್ಕೆ ನಿರ್ಧರಿಸಲಾಗಿದೆ. 1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಸಂದರ್ಭ ಭಾರತದಲ್ಲಿ ಉಂಟಾದ ಗಲಭೆ ಬಳಿಕ ಈ ದೇವಾಲಯವನ್ನು ಮುಚ್ಚಲಾಗಿತ್ತು. ಪೇಷಾವರದಲ್ಲಿರುವ ಗೋರಖ್​ನಾಥ ದೇವಾಲಯವನ್ನೂ ಪುನರುತ್ಥಾನಗೊಳಿಸಲಾಗುತ್ತದೆ ಎಂದು ಪಾಕ್ ಸರ್ಕಾರ ಮಾಹಿತಿ ನೀಡಿದೆ. ಪ್ರತಿವರ್ಷ ಕೆಲ ದೇವಾಲಯಗಳಂತೆ ಹಲವು ಹಂತಗಳಲ್ಲಿ ಜೀಣೋದ್ಧಾರ ಪೂರ್ಣಗೊಳಿಸಿ ಹಿಂದುಗಳಿಗೆ ಒಪ್ಪಿಸಲು ಪಾಕಿಸ್ತಾನ ನಿರ್ಧರಿಸಿದೆ.

ಅಂದು ದೇಗುಲ ಇಂದು ಮದರಸಾ!

ಕೆಲ ವರ್ಷಗಳ ಹಿಂದೆ ಪಾಕಿಸ್ತಾನಿ ಹಿಂದುಗಳ ಹಕ್ಕು ಹೋರಾಟದ ಸಂದರ್ಭದಲ್ಲಿ ಕೈಗೊಂಡ ಸಮೀಕ್ಷೆಯಂತೆ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಒಟ್ಟು 428 ದೇವಾಲಯಗಳಿದ್ದವು. ಈಗ 408 ದೇವಾಲಯ ಉಳಿದಿವೆ. ಇವುಗಳನ್ನು ಗೊಂಬೆ ಮಾರುಕಟ್ಟೆ, ರೆಸ್ಟೋರೆಂಟ್, ಸರ್ಕಾರಿ ಕಚೇರಿ, ಮದರಸಾ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ದೇಶ ವಿಭಜನೆ ಸಂದರ್ಭದಲ್ಲಿ ಪಾಕ್​ನಲ್ಲಿದ್ದ ದೇವಾಲಯಗಳನ್ನು ಅಲ್ಲಿನ ಮುಸ್ಲಿಮರು ವಶಪಡಿಸಿಕೊಂಡಿದ್ದರು. ಕೆಲವು ಹಿಂದು ಕುಟುಂಬಗಳು ಅಲ್ಲಿ ನೆಲೆಸಿದ್ದವಾದರೂ ಅವರನ್ನು ಬೆದರಿಸಿ ದೇವಾಲಯಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದರು.

ಪಾಕ್ ಪೈಲಟ್​ಗೆ ರಫೇಲ್ ತರಬೇತಿ?

ನವದೆಹಲಿ: ಕತಾರ್ ವಾಯುಪಡೆಗೆ ಸೇರ್ಪಡೆಯಾಗು ತ್ತಿರುವ ರಫೇಲ್ ಯುದ್ಧವಿಮಾನಗಳನ್ನು ಹಾರಿಸಲು ಪಾಕಿಸ್ತಾನದ ಪೈಲಟ್​ಗಳಿಗೆ ತರಬೇತಿ ನೀಡಲಾಗಿತ್ತು ಎಂಬ ಸ್ಪೋಟಕ ಸುದ್ದಿ ಹೊರಬಿದ್ದಿದೆ. ವೈಮಾನಿಕ ಕ್ಷೇತ್ರದ ಚಟುವಟಿಕೆಗಳನ್ನು ವರದಿ ಮಾಡುವ ಅಮೆರಿಕದ ಎಐಎನ್​ಆನ್​ಲೈನ್.ಕಾಮ್ ಎಂಬ ಮಾಧ್ಯಮ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ.

ಫ್ರಾನ್ಸ್​ನ ದಸಾಲ್ಟ್ ಕಂಪನಿ ಫೆಬ್ರವರಿಯಲ್ಲಿ ಕತಾರ್​ಗೆ ಮೊದಲ ರಫೇಲ್ ಯುದ್ಧವಿಮಾನ ಹಸ್ತಾಂತರಿಸಿತ್ತು. 2017ರ ನವೆಂಬರ್​ನಲ್ಲಿ ಕತಾರ್ ಪೈಲಟ್​ಗಳಿಗೆ ರಫೇಲ್ ಹಾರಾಟ ಕುರಿತು ತರಬೇತಿ ನೀಡಲಾಗಿತ್ತು. ಈ ಪೈಲಟ್​ಗಳ ಪೈಕಿ ಹೆಚ್ಚಿನವರು ಪಾಕಿಸ್ತಾನದ ವಾಯುಪಡೆಗೆ ಸೇರಿದವರಾಗಿದ್ದರು ಎಂದು ವರದಿ ಹೇಳಿದೆ. 2017ರ ಅ.1ರಂದು ಕತಾರ್ ರಫೇಲ್ ಸ್ಕಾ್ವಡ್ರನ್ ರಚನೆಯಾಗಿತ್ತು. ಇದನ್ನು ಮಾಂಟ್-ದೆ-ಮಾರ್ಸನ್ ಎಂದು ಕರೆಯಲಾಗಿತ್ತು. 2018ರ ಜು.6ರಂದು ಕತಾರ್​ನ ದೊರೆ ಶೇಖ್ ತಮಿಮ್ ಬಿನ್ ಹಮಾದ್, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಇದರ ಪರಿಶೀಲನೆ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತಕ್ಕೆ ಆತಂಕ ಯಾಕೆ?

ಮಧ್ಯಪೂರ್ವ ರಾಷ್ಟ್ರಗಳ ಸೇನೆ ಜತೆಗೆ ಸಶಸ್ತ್ರ ತಾಲೀಮಿನಲ್ಲಿ ಕಳೆದ ಹಲವು ದಶಕಗಳಿಂದ ಪಾಕ್ ವಾಯುಪಡೆ ಭಾಗವಹಿಸುತ್ತಿದೆ. ಜೋರ್ಡಾನ್ ಸೇರಿ ಅನೇಕ ರಾಷ್ಟ್ರಗಳ ಮಿಲಿಟರಿ ಸಾಧನಗಳು, ಎಫ್-16 ಯುದ್ಧವಿಮಾನಗಳನ್ನು ಪಾಕ್​ಗೆ ಈ ಸಂದರ್ಭಗಳಲ್ಲಿ ಹಸ್ತಾಂತರಿಸಿವೆ. ಕತಾರ್ ಕೂಡ ಜೋರ್ಡಾನ್​ನಂತೆ ಪಾಕ್​ಗೆ ರಫೇಲ್ ಯುದ್ಧವಿಮಾನ ಹಸ್ತಾಂತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜಾಗತಿಕ ಒತ್ತಡದಿಂದಾಗಿ ಹಸ್ತಾಂತರಿಸದಿದ್ದರೂ, ತನ್ನ ನೆಲದಲ್ಲಿಯೇ ಪಾಕ್ ಪೈಲಟ್​ಗಳಿಗೆ ರಫೇಲ್ ಹಾರಾಟದ ತರಬೇತಿ ನೀಡಿ ದಾಳಿಗೆ ಸನ್ನದ್ಧರಾಗಿಸಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಚೀನಾ, ಪಾಕ್ ತಕರಾರುಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಅತ್ಯಾಧುನಿಕ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಈಗಾಗಲೇ ಭಾರತ, ಫ್ರಾನ್ಸ್​ನ ದಸಾಲ್ಟ್ ಕಂಪನಿ ಜತೆಗೆ ಮಾಡಿಕೊಂಡಿದೆ. ಆದರೆ ಭಾರತಕ್ಕೆ ರಫೇಲ್ ಹಸ್ತಾಂತರವಾಗುವ ಮುನ್ನವೇ ಪಾಕ್ ಪೈಲಟ್​ಗಳಿಗೆ ರಫೇಲ್ ಸಿಕ್ಕಿದ್ದರೆ, ಆಗ ಭಾರತ ರಣತಂತ್ರಕ್ಕೆ ಧಕ್ಕೆಯಾಗುತ್ತದೆ.

ಸುಳ್ಳು ಸುದ್ದಿ ಎಂದ ಫ್ರಾನ್ಸ್

ಪಾಕಿಸ್ತಾನ ಪೈಲಟ್​ಗಳಿಗೆ ತರಬೇತಿ ನೀಡಲಾಗಿತ್ತು ಎಂಬ ವರದಿ ಹೊರಬಿದ್ದು ವಿವಾದ ಸೃಷ್ಟಿಯಾಗುತ್ತಿದ್ದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಝಿಗ್ಲೆರ್ , ‘ನಾನು ಈ ವರದಿಯನ್ನು ಸುಳ್ಳುಸುದ್ದಿ ಎಂದು ಖಾತ್ರಿಪಡಿಸಬಲ್ಲೆ. ಇದು ಸತ್ಯಕ್ಕೆ ದೂರವಾಗಿದೆ’ ಎಂದಿದ್ದಾರೆ.

48 ಸಾವಿರ ಕೋಟಿ ರೂ.ಗೆ ಖರೀದಿ

ಕತಾರ್ 24 ರಫೇಲ್ ಯುದ್ಧವಿಮಾನ ಖರೀದಿಗೆ 2015ರ ಮೇನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಟ್ಟಾರೆ 48, 972 ಕೋಟಿ ರೂ. ಮೊತ್ತದ ಒಪ್ಪಂದವಿದು. ಇದರ ಭಾಗವಾಗಿ ಫೆ.6ರಂದು ಮೊದಲ ರಫೇಲ್ ಯುದ್ಧವಿಮಾನವನ್ನು ಕತಾರ್​ಗೆ ಹಸ್ತಾಂತರಿಸಲಾಗಿದೆ.

ಬಾಲಾಕೋಟ್​ಗೆ ಮಾಧ್ಯಮ ಪ್ರತಿನಿಧಿಗಳ ಭೇಟಿ

ಭಾರತೀಯ ವಾಯುಪಡೆ ಬಾಲಾಕೋಟ್​ನ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿ ತಿಂಗಳು ಕಳೆದ ನಂತರ ಪಾಕಿಸ್ತಾನ ಸೇನೆ ಬುಧವಾರ ಮಾಧ್ಯಮ ಪ್ರತಿನಿಧಿಗಳು ಮತ್ತು ರಾಯಭಾರಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದೆ. ಬೆಳಗಿನ ಜಾವ ಈ ತಂಡವನ್ನು ಬಾಲಾಕೋಟ್​ನ ಮದರಸಾಕ್ಕೆ ಕರೆದೊಯ್ಯಲಾಗಿದ್ದು ಇಲ್ಲಿ 130 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದನ್ನು ತೋರಿಸಲಾಗಿದೆ. ಇದು ಉಗ್ರ ಶಿಬಿರ ಅಲ್ಲ. ಭಾರತದ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಪಾಕ್ ಸೇನೆ ಹೇಳಿಕೊಂಡಿದೆ. ಮದರಸಾ ಸುತ್ತಮುತ್ತಲಿನ ನಾಲ್ಕು ಪ್ರದೇಶಗಳಿಗೆ ತಂಡವನ್ನು ಕರೆದೊಯ್ಯಲಾಗಿದ್ದು, ಇಲ್ಲಿ ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿದೆ ಎಂದು ಮಾಹಿತಿ ನೀಡಲಾಗಿದೆ. ಬಾಲಾಕೋಟ್​ನಲ್ಲಿ ಉಗ್ರರ ಶಿಬಿರ ಇರಲಿಲ್ಲ. ಮದರಸ ಇದೆ ಎಂದು ಸಾಬೀತುಪಡಿಸಲು ಮತ್ತು ಬಾಲಾಕೋಟ್​ನಲ್ಲಿ ಭಾರತೀಅಯ ಸೇನೆ ನಡೆಸಿರುವ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ತೋರಿಸಲು ಪಾಕಿಸ್ತಾನ ಈ ಯತ್ನ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ಭಾರತ ತನ್ನ ಹಿಂದಿನ ಹೇಳಿಕೆಯನ್ನೇ ಪ್ರತಿಪಾದಿಸುತ್ತದೆ. ವಾಯುಪಡೆ ಉಗ್ರ ಶಿಬಿರವನ್ನು ನಾಶಪಡಿಸಿದೆ ಎಂದು ಹೇಳಿದೆ.