ಪರಿಸರ ಭಯೋತ್ಪಾದನೆಯಡಿ ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ನೀಡಲು ಪಾಕ್​ ನಿರ್ಧಾರ

ಇಸ್ಲಮಾಬಾದ್​: ಭಾರತ ನಡೆಸಿದ ವೈಮಾನಿಕ ದಾಳಿಯಿಂದಾಗಿ ಪೈನ್​ ಮರಗಳು ನಾಶವಾಗಿದೆ ಎಂದು ಆರೋಪಿಸಿ ಪರಿಸರ ಭಯೋತ್ಪಾನೆ ಅಡಿಯಲ್ಲಿ ಭಾರತ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಲು ಪಾಕಿಸ್ತಾನ ನಿರ್ಧರಿಸಿದೆ.

ಭಾರತೀಯ ಜೆಟ್​ ವಿಮಾನಗಳು ಬಾಲಾಕೋಟ್​ ಪ್ರದೇಶದಲ್ಲಿರುವ ಸಂರಕ್ಷಿತ ಅರಣ್ಯ ವಲಯದ ಮೇಲೆ ಬಾಂಬ್​ ದಾಳಿ ನಡೆಸಿದ್ದು, ಈ ಬಗ್ಗೆ ವಿಶ್ವಸಂಸ್ಥೆ ಹಾಗೂ ಇತರೆ ವೇದಿಕೆಗಳಲ್ಲಿ ಭಾರತದ ವಿರುದ್ಧ ದೂರು ಸಲ್ಲಿಸಲು ನಮ್ಮ ಸರ್ಕಾರ ಅಲ್ಲಿನ ವಾಸ್ತವ ಪರಿಸ್ಥಿಯ ಬಗ್ಗೆ ವರದಿ ಸಿದ್ಧಪಡಿಸುತ್ತಿದೆ ಎಂದು ಪಾಕ್​ನ ಪರಿಸರ ಸಚಿವ ಮಲಿಕ್​ ಅಸ್ಲಾಮ್​​ ತಿಳಿಸಿದ್ದಾರೆ.

ಪರಿಸರ ಭಯೋತ್ಪಾದನೆ ಎಂದು ಕರೆದಿರುವ ಸಚಿವರು ಬಾಂಬ್​ ದಾಳಿಯಿಂದ ಡಜನ್​ಗಟ್ಟಲೇ ಪೈನ್​ ಮರಗಳು ನೆಲಕ್ಕುರುಳಿವೆ. ಅಲ್ಲಿ ಗಂಭೀರತರವಾದ ಪರಿಸರ ಹಾನಿಯುಂಟಾಗಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 47/37 ಪ್ರಕಾರ ಪರಿಸರ ನಾಶ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದದ್ದು ಎಂಬ ಅಂಶವನ್ನು ಪಾಕಿಸ್ತಾನ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ.

ಫೆ. 14 ರಂದು ಸಿಆರ್​ಪಿಎಫ್​ ಯೋಧರ ಮೇಲೆ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಫೆ.27ರಂದು ಭಾರತ ವೈಮಾನಿಕ ದಾಳಿ ನಡೆಸಿತು. ಗಡಿ ನಿಯಂತ್ರಣಾ ರೇಖೆಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಪಾಕ್​ನ ಬಾಲಾಕೋಟ್​ನಲ್ಲಿನ ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆಯ ಉಗ್ರರ ಅಡಗುತಾಣಗಳನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿತ್ತು. ಈ ದಾಳಿಯಲ್ಲಿ ನೂರರು ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಪಾಕಿಸ್ತಾನ ಆ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳು ಇರುವುದನ್ನು ನಿರಾಕರಿಸಿತ್ತು. ಬದಲಾಗಿ ದಾಳಿಯಲ್ಲಿ ಅಲ್ಲಿನ ನಾಗರಿಕರು ಗಾಯಗೊಂಡಿದ್ದಾರೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​)