ಪಾಕ್​ನಿಂದ ಸೆಟಲೈಟ್ ಕರೆ?: ಚಿಕ್ಕಮಗಳೂರು, ಬೆಳ್ತಂಗಡಿಯಲ್ಲಿ ಲೊಕೇಷನ್ ಪತ್ತೆ, ಎನ್​ಐಎ ತನಿಖೆ

ಮಂಗಳೂರು/ಉಡುಪಿ: ದೇಶಾದ್ಯಂತ ಉಗ್ರಾತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನದಿಂದ ಕರ್ನಾಟಕಕ್ಕೆ ಸೆಟಲೈಟ್ ಕರೆಗಳು ಬಂದಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಚಿಕ್ಕಮಗಳೂರು ಹಾಗೂ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಕರೆಗಳ ಲೊಕೇಷನ್ ಪತ್ತೆಯಾಗಿದ್ದು, ಎನ್​ಐಎ ಅಧಿಕಾರಿಗಳ ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಉಗ್ರ ದಾಳಿ ಸಂಚಿನ ಬಗ್ಗೆ ಸೆಟಲೈಟ್ ಕರೆಗಳು ಬಂದಿರುವ ಮಾಹಿತಿ ದೊರೆತ ನಂತರವೇ ಎನ್​ಐಎ ಸೂಚನೆ ಮೇರೆಗೆ ಕೇಂದ್ರ ಗುಪ್ತಚರ ಇಲಾಖೆ ಹೈ ಅಲರ್ಟ್ ಘೋಷಿಸಿದೆ ಎಂದು ಹೇಳುತ್ತಿದೆ. ಕರೆಗಳ ಲೊಕೇಶನ್ ನಮೂದಾಗಿರುವ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಎನ್​ಐಎ ತಂಡ 3 ದಿನಗಳಿಂದ ಮಂಗಳೂರಿನಲ್ಲಿ ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಅನುಮಾನಾಸ್ಪದ ಫೋನ್ ಕರೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಕೋಸ್ಟ್​ಗಾರ್ಡ್ ಹಾಗೂ ನೌಕಾಪಡೆಯು ಹೊರ ರಾಜ್ಯದ ದೋಣಿಗಳ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಪಡೆಯುತ್ತಿದೆ. ಕರಾವಳಿಯಲ್ಲಿನ ಎಲ್ಲ ಚಟುವಟಿಕೆಗಳ ಮೇಲೆ ಎನ್​ಐಎ ಅಧಿಕಾರಿಗಳು ಗಮನ ಇಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರ್ ಸ್ಥಳೀಯ ಪೊಲೀಸ್ ಅಧಿಕಾರಿಗಳು, ನೌಕಾಪಡೆ ಹಾಗೂ ಕೋಸ್ಟ್​ಗಾರ್ಡ್ ಅಧಿಕಾರಿಗಳ ಜತೆ 3 ಗಂಟೆಗಳಿಗೊಮ್ಮೆ ಮಾಹಿತಿ ಪಡೆಯುತ್ತಿದ್ದಾರೆ.

ಮಂಗಳೂರಿನಲ್ಲಿ ವ್ಯಾಪಕ ತಪಾಸಣೆ

ಶುಕ್ರವಾರ ರಾತ್ರಿಯಿಂದ ನವಮಂಗಳೂರು ಬಂದರು, ಎಂಆರ್​ಪಿಎಲ್, ಎನ್​ಐಟಿಕೆ, ಕೆಐಒಸಿಎಲ್, ಮಂಗಳೂರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವ್ಯಾಪಕ ತಪಾಸಣೆ ನಡೆಯುತ್ತಿದೆ. ಶುಕ್ರವಾರ ರಾತ್ರಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣ, ಮಣಿಪಾಲ ಮಾಹೆ ವಿದ್ಯಾಸಂಸ್ಥೆ, ಸಿಟಿ-ಸರ್ವೀಸ್ ಬಸ್ ನಿಲ್ದಾಣ, ಮಲ್ಪೆ-ಗಂಗೊಳ್ಳಿ ಬಂದರು, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಕಾರ್ಕಳ-ಭಟ್ಕಳ ಬಸ್ ನಿಲ್ದಾಣ ಹಾಗೂ ಕೆ.ಎಸ್.ಹೆಗ್ಡೆ, ಮುಡಿಪು ಇನ್ಪೋಸಿಸ್, ಸೂರ್ಯ ಇನ್ಪೋಟೆಕ್ ಮುಂತಾದೆಡೆ ಶ್ವಾನದಳ, ಬಾಂಬ್ ಪತ್ತೆ ದಳ ಮತ್ತು ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಗಿದೆ.

ಕೆಲವು ತಿಂಗಳುಗಳ ಹಿಂದೆ ಜಲಾಶಯಕ್ಕೆ ಮೊಸಳೆಗಳನ್ನು ಬಿಡಲಾಗಿದೆ. ಮೊಸಳೆಗಳಿಂದ ತಪ್ಪಿಸಿಕೊಂಡು ನೀರಿನಲ್ಲಿ ಈಜಿ ಬರಲು ಸಾಧ್ಯವಿಲ್ಲ.

| ಆರ್.ಪಿ. ಕುಲಕರ್ಣಿ ಮುಖ್ಯ ಇಂಜಿನಿಯರ್, ಕೆಬಿಜೆಎನ್​ಎಲ್

ಬಸವಸಾಗರ ಡ್ಯಾಂ ವೀಕ್ಷಣೆ ನಿರ್ಬಂಧ

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಲಾಲ್​ಬಹದ್ದೂರ್ ಶಾಸ್ತ್ರಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಆಲಮಟ್ಟಿ ಉದ್ಯಾನಗಳು ಹಾಗೂ ಸಮೀಪದ ದೇವಸ್ಥಾನಗಳ ಮೇಲೆ ಪೊಲೀಸರ ಸರ್ಪಗಾವಲಿದೆ. ಜಲಾಶಯದ 1.5 ಕಿ.ಮೀ. ವ್ಯಾಪ್ತಿ ಹಾಗೂ ಜಲಾಶಯದ ಎರಡೂ ಬದಿ ವಿಶೇಷ ತರಬೇತಿ ಹೊಂದಿದ ಕರ್ನಾಟಕ ಕೈಗಾರಿಕೆ ಭದ್ರತಾ ಪಡೆಯ 96 ಸಿಬ್ಬಂದಿ, ವಿಜಯಪುರದ ಸಶಸ್ತ್ರ ಮೀಸಲು ಪಡೆಯ 10 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಶನಿವಾರ ಯಾದಗಿರಿಯ ಬಸವಸಾಗರ ಜಲಾಶಯದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 3 ಡಿಆರ್ ತುಕಡಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್​ಪಿ ಋಷಿಕೇಶ ಭಗವಾನ್ ಸೋನವಾಣೆ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *