ಉಗ್ರ ಹಫೀಜ್​ ಸಯ್ಯೀದ್​ ವಿಚಾರಣೆಗೆ ಬರಲಿದ್ದ ವಿಶ್ವಸಂಸ್ಥೆಯ ತಂಡಕ್ಕೆ ವೀಸಾ ನಿರಾಕರಿಸಿದ ಪಾಕಿಸ್ತಾನ

ನ್ಯೂಯಾರ್ಕ್​/ನವದೆಹಲಿ: ನಿಷೇಧಿತ ಭಯೋತ್ಪಾದನಾ ಸಂಘಟನೆ ಲಷ್ಕರ್​ ಎ ತಯ್ಬಾದ ಪ್ರಮುಖ ಉಗ್ರ ಹಫೀಜ್​ ಸಯ್ಯೀದ್​ನ ವಿಚಾರಣೆಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ವಿಶ್ವಸಂಸ್ಥೆಯ ತಂಡಕ್ಕೆ ಪಾಕ್​ ಸರ್ಕಾರ ವೀಸಾ ನಿರಾಕರಿಸಿದೆ. ಇದರಿಂದಾಗಿ ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆಸಿ ಹಾಕಿಸಿಕೊಳ್ಳಬೇಕು ಎಂಬ ಸಯ್ಯೀದ್​ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ನಿಷೇಧಿತ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಿದೆ. ವಿಶ್ವಸಂಸ್ಥೆಯು ನಿಷೇಧಿಸಿರುವ ಉಗ್ರರ ಹೆಸರನ್ನು ಈ ಪಟ್ಟಿ ಒಳಗೊಂಡಿದೆ. ಈ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ಯಾರೇ ಮನವಿ ಮಾಡಿದರೂ, ಅವರಿರುವ ರಾಷ್ಟ್ರಕ್ಕೆ ತೆರಳುವ ವಿಶ್ವಸಂಸ್ಥೆಯ ನಿಯೋಗ ನಿರ್ದಿಷ್ಟ ಉಗ್ರನನ್ನು ವಿಚಾರಣೆಗೆ ಒಳಪಡಿಸಿ, ಆತ ಹಿಂಸಾಕೃತ್ಯಗಳಲ್ಲಿ ತೊಡಗಿಲ್ಲ ಎಂದು ಖಚಿತಪಡಿಸಿಕೊಂಡು ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡುತ್ತದೆ.

ಹೀಗೆ ವಿಶ್ವಸಂಸ್ಥೆ ನಿಯೋಗ ನಡೆಸುವ ವಿಚಾರಣೆ ವೇಳೆ ಭಯೋತ್ಪಾದನೆ ಸಂಘಟನೆಗಳಿಗೆ ತಾನು ಕೊಡುತ್ತಿರುವ ಕುಮ್ಮಕ್ಕು, ಉಗ್ರರ ಜತೆಗಿನ ನಂಟು ಸೇರಿ ಇನ್ನೂ ಹಲವು ಸಂಗತಿಗಳನ್ನು ಬಾಯ್ಬಿಟ್ಟು ಹಫೀಜ್​ ಸಯ್ಯೀದ್​ ಜಾಗತಿಕವಾಗಿ ತನಗೆ ಇನ್ನಷ್ಟು ಮುಜುಗರ ಉಂಟು ಮಾಡಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆಯ ನಿಯೋಗಕ್ಕೆ ವೀಸಾ ನಿರಾಕರಿಸಿತು ಎನ್ನಲಾಗುತ್ತಿದೆ.

ವಿಡಿಯೋ ವಿಚಾರಣೆ: 26/11 ಮುಂಬೈ ಮೇಲಿನ ಉಗ್ರರ ದಾಳಿಯ ಪ್ರಮುಖ ಸಂಚುಕೋರ ಹಫೀಜ್​ ವಿಚಾರಣೆಗೆ ಪಾಕಿಸ್ತಾನ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ನಿಯೋಗದ ಮುಖ್ಯಸ್ಥ ಡೇನಿಯಲ್​ ಕೀಪ್​ಫರ್​ ಫೇಸಿಯಾಟಿ ವಿಡಿಯೋ ಸಂದರ್ಶನದ ಮೂಲಕ ಹಫೀಜ್​ನನ್ನು ವಿಚಾರಣೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಆತನಿಂದ ಸಮಾಧಾನಕರ ಉತ್ತರ ಬಾರದ ಕಾರಣ, ಆತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿಷೇಧಿತ ಉಗ್ರರ ಪಟ್ಟಿಯಲ್ಲಿ ಮುಂದುವರಿಸಲು ನಿರ್ಧರಿಸಿದರು. (ಏಜೆನ್ಸೀಸ್​)