ಗಡಿಯಲ್ಲಿ 275 ಉಗ್ರರು: ಎಲ್​ಒಸಿ ಬಳಿ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದ ಪಾಕಿಸ್ತಾನ

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿ ಬಳಿಕ ಭಾರತದ ಪ್ರತೀಕಾರ ಮತ್ತು ಅಂತಾರಾಷ್ಟ್ರೀಯ ಮಟ್ಟದ ತನಿಖೆ ಭಯದಿಂದ ಉಗ್ರರ ನೆಲೆಗಳನ್ನು ಭಾರತದ ಗಡಿ ಭಾಗದಿಂದ ಸ್ಥಳಾಂತರಿಸಿದ್ದ ಪಾಕಿಸ್ತಾನ ಇದೀಗ ಉಗ್ರರನ್ನು ಮತ್ತೆ ಗಡಿ ಭಾಗಕ್ಕೆ ಕರೆಸಿಕೊಂಡಿದೆ.

275 ಉಗ್ರರನ್ನು ಭಾರತಕ್ಕೆ ಕಳುಹಿಸುವ ಉದ್ದೇಶದಿಂದ 7 ನೆಲೆಗಳನ್ನು ಗಡಿಭಾಗದಲ್ಲಿ ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ಅಫ್ಘಾನಿಸ್ತಾನ ಮತ್ತು ಪಶ್ತೂನ್ ಪ್ರಾಂತ್ಯದ ಉಗ್ರರೂ ಇದ್ದಾರೆ ಎನ್ನಲಾಗಿದೆ. ಇದು ಅಚ್ಚರಿ ಮೂಡಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಗುಪ್ತಚರ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರ, ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ದಳ ಐಎಸ್​ಐ ಗಡಿ ಭಾಗದಲ್ಲಿ ಉಗ್ರರ ಲಾಂಚ್​ಪ್ಯಾಡ್ ರೂಪಿಸಿವೆ. ಇದರ ಮೂಲಕ ಒಟ್ಟು 275 ಉಗ್ರರು ಭಾರತದೊಳಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಗುರೆಜ್​ನಿಂದ 80, ಮಚ್ಚಾಲ್​ನಿಂದ 60, ಕಾರ್ನಹ್​ನಿಂದ 50, ಕೇರನ್​ನಿಂದ 40, ಉರಿಯಿಂದ 20, ನವ್​ಗಾಂನಿಂದ 15 ಮತ್ತು ರಾಮ್ುರದಿಂದ 10 ಉಗ್ರರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ನುಣುಚಿಕೊಳ್ಳುವ ತಂತ್ರ: ಆಫ್ಘನ್, ಪಶ್ತೂನ್​ನ ಉಗ್ರರನ್ನು ಬಳಸಿಕೊಳ್ಳುತ್ತಿರುವುದು ಪಾಕಿಸ್ತಾನದ ತಂತ್ರಕ್ಕೆ ಸಾಕ್ಷಿಯಾಗಿದೆ. ಈ ಉಗ್ರರನ್ನು ಭಾರತದ ಗಡಿಯೊಳಕ್ಕೆ ಕಳುಹಿಸಿ ದಾಳಿ ನಡೆಸಿದರೂ ಅವರು ಆಫ್ಘಾನ್ ಮತ್ತು ಪಶ್ತೂನ್​ನ ಉಗ್ರರಾಗಿರುವುದರಿಂದ ಇದರಲ್ಲಿ ತನ್ನ ಕೈವಾಡವೇನೂ ಇಲ್ಲ ಎಂದು ಪಾಕ್ ಸಮರ್ಥಿಸಿಕೊಳ್ಳಬಹುದಾಗಿದೆ.

ಲಷ್ಕರ್ ಉಗ್ರ ಆಸಿಫ್ ಹತ್ಯೆ

ಲಷ್ಕರ್​ನ ಪ್ರಮುಖ ಉಗ್ರ ಆಸಿಫ್​ನನ್ನು ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ಸೊಪೋರ್​ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ವಾಹನ ಪರಿಶೀಲನೆ ನಡೆಸುತ್ತಿದ್ದಾಗ ಕಾರಿನಲ್ಲಿ ಬಂದ ಆಸಿಫ್, ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ. ಗ್ರೆನೇಡ್ ಕೂಡ ಸ್ಪೋಟಿಸಿದ. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾಪಡೆಗಳು ಆತನನ್ನು ಹತ್ಯೆಗೈದಿವೆ. ಕಳೆದ ಒಂದು ತಿಂಗಳಿನಿಂದ ಕಾಶ್ಮೀರ ಭಾಗದಲ್ಲಿ ಸಕ್ರಿಯವಾಗಿರುವ ಆಸಿಫ್, ಅಲ್ಲಿನ ಅಂಗಡಿ ಮುಂಗಟ್ಟು ಗಳನ್ನು ಮುಚ್ಚುವಂತೆ ಬೆದರಿಕೆಯೊಡ್ಡುತ್ತಿದ್ದ ಎನ್ನಲಾಗಿದೆ.

ಉಗ್ರರ ಕೋಡ್ ವರ್ಡ್

ಪಾಕ್ ಸೇನೆ ಮತ್ತು ವಿವಿಧ ಉಗ್ರ ಸಂಘಟನೆಗಳು ಸಂವಹನಕ್ಕೆ ಬಳಕೆ ಮಾಡುತ್ತಿದ್ದ ಕೋಡ್​ವರ್ಡ್​ನ ಅರ್ಥವನ್ನು ಭಾರತೀಯ ಗುಪ್ತಚರ ಇಲಾಖೆ ಕಂಡುಕೊಂಡಿದೆ. ಕರೆಗಳಲ್ಲಿ ಇವರು ಜೆಇಎಂಗೆ 66/88, ಎಲ್​ಇಟಿಗೆ ಎ3 ಮತ್ತು ಅಲ್ ಬದ್ರ್​ಗೆ ಡಿ9 ಎನ್ನುವ ಕೋಡ್​ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಕಳೆದ ಆ.12ರಿಂದ ಈ ಕೋಡ್​ಗಳನ್ನು ಬಳಕೆ ಮಾಡುತ್ತಿವೆ. ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಎಫ್​ಎಂ ಟ್ರಾನ್ಸ್​ಮಿಷನ್ ಸ್ಟೇಷನ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪಾಕ್ ಸೇನೆ ವಿಎಚ್​ಎಫ್(ವೆರಿ ಹೈ ಫ್ರೀಕ್ವೆನ್ಸಿ) ರೇಡಿಯೋ ಸ್ಟೇಷನ್​ಗಳನ್ನು ಭಾರತ ಗಡಿ ಭಾಗದ ಸಮೀಪಕ್ಕೆ ಸ್ಥಳಾಂತರಿಸುವಂತೆ ಸೂಚಿಸಿತ್ತು. ಅಲ್ಲದೆ ನೂತನ ಎಫ್​ಎಂ ಸ್ಟೇಷನ್​ಗಳ ನಿರ್ಮಾಣ ನಡೆಸುತ್ತಿದೆ. ಇದರಲ್ಲಿ ಸೇನೆಯ ಯೋಧರನ್ನೂ ಬಳಸಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಐಎಸ್​ಐ ಮುಂದಾಳತ್ವ

ಪಾಕ್ ಸೇನೆ ಮತ್ತು ಐಎಸ್​ಐ ಉಗ್ರರನ್ನು ಪೋಷಿಸುತ್ತಿರುವ ವಿಚಾರ ಹೊಸತಲ್ಲ. ಐಎಸ್​ಐ ಉಗ್ರರನ್ನು ಒಂದು ಗುಂಪಿನಿಂದ ಇನ್ನೊಂದು ಸಂಘಟನೆಗೆ ವರ್ಗಾಯಿಸುವ ಕಾರ್ಯವನ್ನೂ ಮಾಡುತ್ತದೆ. ಪುಲ್ವಾಮಾ ದಾಳಿ ಬಳಿಕ ಜೈಷ್ ಎ ಮೊಹಮ್ಮದ್ ಚಾಲ್ತಿಗೆ ಬಂದಾಗ ಇದರ ಉಗ್ರರನ್ನು ಖೈಬರ್ ಫಖ್ತುಂಖ್ವಾದ ಅಲ್ ಬದ್ರ್ ಸಂಘಟನೆಗೆ ವರ್ಗಾಯಿಸಿತ್ತು.

ಸ್ಥಳೀಯ ಯುವಕರ ಸೇರ್ಪಡೆ ಇಲ್ಲ

ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆ ಸೇರ್ಪಡೆ ಆಗಿಲ್ಲ ಎಂದು ಜಮ್ಮು- ಕಾಶ್ಮೀರದ ಡಿಜಿಪಿ ದಿಲ್​ಬಾಗ್ ಸಿಂಗ್ ಹೇಳಿದ್ದಾರೆ. ಈ ಹಿಂದೆ ಕೆಲ ಯುವಕರು ದುಡುಕಿ ಉಗ್ರ ಸಂಘಟನೆಗಳತ್ತ ವಾಲಿದ್ದರು. ಇವರಲ್ಲಿ ಹೆಚ್ಚಿನ ಯುವಕರಿಗೆ ಮನದಟ್ಟು ಮಾಡಿ, ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸಾಮಾನ್ಯ ಸ್ಥಿತಿಯತ್ತ ಮರಳಿದ ಜನಜೀವನ

ಕಣಿವೆ ರಾಜ್ಯದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಶ್ರೀನಗರದಲ್ಲಿ ಬುಧವಾರದಿಂದ ಖಾಸಗಿ ವಾಹನಗಳು ರಸ್ತೆಗಿಳಿದಿದ್ದು, ಟ್ರಾಫಿಕ್ ಜಾಮ್ ಆಗಿತ್ತು. ಆದರೆ ಶ್ರೀನಗರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ. ಸಾರ್ವಜನಿಕ ಸಾರಿಗೆ ಕೂಡ ಸೇವೆಯನ್ನು ಆರಂಭಿಸಿಲ್ಲ. ಭದ್ರತಾಪಡೆಗಳು ಶಾಲೆಗಳನ್ನು ತೆರೆಯಲು ಸೂಚಿಸಿದ್ದರೂ, ಪಾಲಕರೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎನ್ನಲಾಗಿದೆ.

ಚೀನಾ ಗಡಿಯಲ್ಲಿ ಭಾರತ ಸಮರಾಭ್ಯಾಸ

ನವದೆಹಲಿ: ಭಾರತೀಯ ಭೂಸೇನೆ ಮತ್ತು ವಾಯುಪಡೆ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಚೀನಾದ ಗಡಿ ಸಮೀಪ ಮುಂದಿನ ತಿಂಗಳು ಜಂಟಿ ಸಮರಾಭ್ಯಾಸ ನಡೆಸಲಿವೆ. ಉಭಯ ಪಡೆಗಳ ಸೇನಾ ತುಕಡಿಗಳನ್ನು ಸಮರಾಭ್ಯಾಸ ನಡೆಯಲಿರುವ ಸ್ಥಳಕ್ಕೆ ರವಾನಿಸುವ ಕಾರ್ಯ ಆರಂಭವಾಗಿದೆ.

ಯುದ್ಧಾಭ್ಯಾಸದಲ್ಲಿ ವಿಶೇಷ ತರಬೇತಿ ಪಡೆದ ಐದು ಸಾವಿರಕ್ಕೂ ಹೆಚ್ಚು ಯೋಧರು ಭಾಗವಹಿಸಲಿದ್ದು, 50ಕ್ಕೂ ಹೆಚ್ಚು ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳನ್ನು ನಿಯೋಜಿಸಲಾಗಿದೆ. ಇವು ಬಾಗ್ದೋಗ್ರಾದಿಂದ ಸೇನಾ ತುಕಡಿಗಳನ್ನು ಅರುಣಾಚಲ ಪ್ರದೇಶದಲ್ಲಿ ಸಮರಾಭ್ಯಾಸಕ್ಕಾಗಿ ಗುರುತಿಸಲಾಗಿರುವ ಸ್ಥಳಕ್ಕೆ ಕರೆದೊಯ್ಯಲಿವೆ. ದೇಶದ ಪೂರ್ವ ಭಾಗದ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮೊದಲ ಸಮರಾಭ್ಯಾಸ ಇದಾಗಿದೆ. ಈ ಸಮರಾಭ್ಯಾಸಕ್ಕೆ ಅರುಣಾಚಲ ಪ್ರದೇಶದ ಗಡಿಭಾಗವನ್ನೇ ಆಯ್ಕೆ ಮಾಡಿಕೊಂಡಿರುವುದರಿಂದ ಚೀನಾ ಆತಂಕ ಗೊಂಡಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು ಎಂದು ಹೇಳಿದೆ.

Leave a Reply

Your email address will not be published. Required fields are marked *