ಜೈಷ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಜೀವಂತವಾಗಿದ್ದಾನೆ: ರಾವಲ್ಪಿಂಡಿ ಆಸ್ಪತ್ರೆಯಿಂದ ಭಹವಾಲ್​ಪುರ್​ನ ಜೈಷ್​ ಶಿಬಿರಕ್ಕೆ ಸ್ಥಳಾಂತರ

ಶ್ರೀನಗರ: ಭಯೋತ್ಪಾದನೆ ಸಂಘಟನೆ ಜೈಷ್​ ಎ ಮೊಹಮ್ಮದ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಜೀವಂತವಾಗಿದ್ದಾನೆ. ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ಆತನಿಗೆ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಈಗ ಆತನನ್ನು ಭಹವಾಲ್​ಪುರದ ಗೋತ್​ ಘನ್ನಿಯಲ್ಲಿರುವ ಜೈಷ್​ ಶಿಬಿರಕ್ಕೆ ಭಾನುವಾರ ರಾತ್ರಿ 7.30ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಮಾಹಿತಿ ಸಂಗ್ರಹಿಸಿದ್ದಾರೆ.

ಜೈಷ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಬಾಲಾಕೋಟ್​ ಮೇಲಿನ ಭಾರತೀಯ ವಾಯುಪಡೆಯ ದಾಳಿ ಸಂದರ್ಭದಲ್ಲಿ ಮೃತಪಟ್ಟಿರಬಹುದು. ಇಲ್ಲವೇ ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟಿರಬಹುದು ಎಂಬ ವದಂತಿ ಭಾನುವಾರ ದಟ್ಟವಾಗಿ ಹಬ್ಬಿದ್ದವು. ಆದರೆ ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಅಲ್ಲಿನ ಮಾಧ್ಯಮಗಳಾಗಲಿ ಅದನ್ನು ಖಚಿತಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಅಜರ್​ ಸಾವಿನ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು.

ಇಮ್ರಾನ್​ ಖಾನ್​ಗೆ ತರಾಟೆ: ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತನ್ನವರನ್ನೇ ಅಪಾಯಕ್ಕೆ ಸಿಲುಕಿಸಲು ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜೈಷ್​ ಎ ಮೊಹಮ್ಮದ್​ ಸಂಘಟನೆಯ ಕೆಲ ಪ್ರಮುಖ ಉಗ್ರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್​ ಮೇಲೆ ದಾಳಿ ಮಾಡಿದ ಭಾರತೀಯ ಯೋಧನನ್ನು ಬಿಟ್ಟು ಕಳುಹಿಸಲು ಪ್ರಧಾನಿ ಇಮ್ರಾನ್​ ಖಾನ್​ ಸಮ್ಮತಿಸಿದರು. ಈಗ ಧಾರ್ಮಿಕ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಶತ್ರುವಿನ ವಿಷಯದಲ್ಲಿ ಮೃದುಧೋರಣೆ ಅನುಸರಿಸುತ್ತಿರುವ ಅವರು, ತಮ್ಮವರ ಬಗ್ಗೆ ಕಠಿಣ ನಿಲುವು ತೆಳೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಇಮ್ರಾನ್​ ಖಾನ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಷರ್ರಫ್​ ರೀತಿಯ ಕ್ರಮ: ಅಮೆರಿಕದ ವಿಶ್ವ ವಾಣಿಜ್ಯ ಸಂಘಟನೆಯ ಅವಳಿ ಕಟ್ಟಡಗಳ ಮೇಲೆ 9/11ರಂದು ನಡೆದ ದಾಳಿಯ ನಂತರದಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್​ ಮುಷರ್ರಫ್​ ಪಾಕಿಸ್ತಾನದಲ್ಲಿದ್ದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಅನುಸರಿಸಿದ್ದರು. ಇದೀಗ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಪರ್ವೆಜ್​ ಮುಷರ್ರಫ್​ ಅವರಂತೆ ಭಯೋತ್ಪಾದನೆ ಸಂಘಟನೆಗಳನ್ನು ನಿಗ್ರಹಿಸುವ ದಮನಕಾರಿ ನೀತಿಗಳನ್ನು ಅನುಸರಿಸಲಾರಂಭಿಸಿದ್ದಾರೆ ಎಂದು ಜೈಷ್​ ಆರೋಪಿಸಿದೆ.

ಐಎಎಫ್​ ದಾಳಿ ನಡೆದಿದ್ದು ನಿಜ: ಬಾಲಾಕೋಟ್​ನ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ಮಾಡಿದ್ದು ನಿಜ. ದಾಳಿಯಲ್ಲಿ ಅವರು ಇಸ್ರೇಲ್​ ನಿರ್ಮಿತ ನಿರ್ದೇಶಿಸಬಹುದಾದ ಕ್ಷಿಪಣಿಗಳನ್ನು ಬಳಸಿದ್ದರು. ಆದರೆ, ಅದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಜೈಷ್​ ಉಗ್ರರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)