More

    ಪಾಕ್ ಜನತೆಗೆ ಹೊರೆಯಾದ ಇಂಧನ ದರ; ಒಂದು ಲೀ. ಪೆಟ್ರೋಲ್ ಬೆಲೆ 249 ರೂ.!

    ಕರಾಚಿ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿ ಹೋಗಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಏರುಗತಿಯಲ್ಲೇ ಸಾಗುತ್ತಿದೆ. ಇದರಿಂದ ಪಾಕಿಸ್ತಾನದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೆ ಪರದಾಟುವಂತಾಗಿದೆ. ಇದೀಗ ಇಂಧನ ಬೆಲೆಯಲ್ಲಿ ಏರಿಕೆ ಕಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್​​ಗೆ ಒಂದೇ 35 ರೂ. ಹೆಚ್ಚಳವಾಗಿದೆ. ಈ ಮೂಲಕ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕ್ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಇಂಧನ ಬೆಲೆಯನ್ನು ಏರಿಸಲಾಗಿದೆ. ನಮ್ಮ ದೇಶಕ್ಕೆ ಜಾಗತಿಕ ಮಾರುಕಟ್ಟೆಯಿಂದ ಇಂಧನವನ್ನು ಖರೀದಿಸಲು ಹೆಚ್ಚು ವೆಚ್ಚ ತಗಲುತ್ತಿದೆ. ಇದನ್ನು ಭರಿಸಲು ಇಂಧನ ಬೆಲೆಯಲ್ಲಿ 35 ರೂ. ಏರಿಕೆ ಮಾಡಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಹೇಳಿದ್ದಾರೆ. ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ತಕ್ಷಣವೇ ಜಾರಿಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಸೀಮೆ ಎಣ್ಣೆ ಹಾಗೂ ಲೈಟ್ ಡೀಸೆಲ್ ದರ 18 ರೂ. ಏರಿಕೆಯಾಗಿದೆ. ಸದ್ಯ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 249.80 ರೂಪಾಯಿಗೆ ಏರಿಕೆಯಾದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 262.80 ರೂ. ಗೆ ಏರಿಕೆಯಾಗಿದೆ.

    ಅಲ್ಲಾಹುವಿಗೆ ಪಾಕಿಸ್ತಾನವನ್ನು ಸೃಷ್ಟಿಸಲು ಸಾಧ್ಯವಾದರೆ, ಸಮಸ್ಯೆಯಿಂದಲೂ ಪಾರು ಮಾಡಿ ರಕ್ಷಿಸಲು ಸಾಧ್ಯವಾಗುತ್ತದೆ. ಎದುರಾಗಿರುವ ಸಂಕಷ್ಟದಿಂದ ಪಾರು ಮಾಡಿ ಅಭಿವೃದ್ಧಿಸಗೊಳಿಸಬಹುದು ಎಂದು ಹಣಕಾಸು ಸಚಿವ ಇಶಾಕ್ ದಾರ್ ಹೇಳಿಕೊಂಡಿದ್ದಾರೆ.

    ಹಣದ ಕೊರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನ ಸ್ನೇಹ ರಾಷ್ಟ್ರದಿಂದ ಹಣದ ಸಹಾಯ ಕೇಳಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಕಳೆದ ವರ್ಷ ಪ್ರವಾಹದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಯುನೈಟೆಡ್ ಸ್ಟೇಟ್ಸ್​ ಆರ್ಥಿಕ ಸಹಾಯ ಮಾಡಲು ಒಪ್ಪಿದೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts