ಲಷ್ಕರ್​ ಸಂಘಟನೆಯ ಜಮಾತ್​ ಉದ್​ ದವಾ ಮತ್ತು ಫಲ್ಹಾ ಇನ್ಸಾನಿಯತ್​ ಸಂಸ್ಥೆಗಳ ಆಡಳಿತ ವಹಿಸಿಕೊಂಡ ಪಾಕಿಸ್ತಾನ ಸರ್ಕಾರ

ಇಸ್ಲಾಮಾಬಾದ್​: ಭಯೋತ್ಪಾದನೆ ಸಂಘಟನೆ ಲಷ್ಕರ್​ ಎ ತಯ್ಬಾದ ಅಂಗಸಂಸ್ಥೆಗಳಾದ ನಿಷೇಧಿತ ಜಮಾತ್​ ಉದ್​ ದವಾ (ಜೆಯುಡಿ) ಮತ್ತು ಫಲ್ಹಾ ಎ ಇನ್ಸಾನಿಯತ್​ಗಳ ಸಂಪೂರ್ಣ ಆಡಳಿತವನ್ನು ತಾನೇ ವಹಿಸಿಕೊಂಡಿರುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ.

ಜತೆಗೆ ಲಾಹೋರ್​ನ ಚೌಬುರ್ಜಿಯಲ್ಲಿರುವ ಜೆಯುಡಿಯ ಮಸೀದಿ ಮತ್ತು ಮದರಸಾದ ಆಡಳಿತವನ್ನು ಶೀಘ್ರದಲ್ಲೇ ತಾನೇ ವಹಿಸಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಕೆಲದಿನಗಳ ಹಿಂದೆ ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಜೈಷ್​ ಎ ಮೊಹಮ್ಮದ್​ನ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ನಡೆಸಿದ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲೆ ಉಗ್ರನೊಬ್ಬ ನಡೆಸಿದ್ದ ಆತ್ಮಾಹುತಿ ನಡೆಸಿದೆ ಎನ್ನಲಾದ ಎಲ್ಲ ಸಂಘಟನೆಗಳನ್ನು ನಿಷೇಧಿಸಿ, ಅವುಗಳ ಆಸ್ತಿಪಾಸ್ತಿಯನ್ನು ಪಾಕಿಸ್ತಾನ ಸರ್ಕಾರ ವಶಕ್ಕೆ ಪಡೆದುಕೊಂಡಿತ್ತು.

ಈ ರೀತಿ ಧಾರ್ಮಿಕ ಸಂಘಟನೆಗಳು ನಡೆಸುತ್ತಿರುವ 182 ಶಾಲೆಗಳನ್ನು ವಶಪಡಿಸಿಕೊಂಡು, ಅಂದಾಜು 100ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಗುರುವಾರ ಬೆಳಗ್ಗೆ ಹೇಳಿಕೊಂಡಿತ್ತು. ತುಂಬಾ ಹಿಂದೆಯೇ ಇಂತಹ ಕಾರ್ಯಾಚರಣೆ ರೂಪಿಸಲಾಗಿತ್ತು. ಅದನ್ನು ಈಗ ಜಾರಿಗೊಳಿಸಲಾಗುತ್ತಿದೆ. ಭಾರತ ಅಥವಾ ಜಾಗತಿಕ ಒತ್ತಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ಗೃಹ ಸಚಿವಾಲಯ ಸ್ಪಷ್ಟಪಡಿಸಿತ್ತು. ಇದೀಗ ನಿಷೇಧಿತ ಪ್ರಮುಖ ಉಗ್ರ ಸಂಘಟನೆಗೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಅದು ಕ್ರಮ ಕೈಗೊಂಡಿದೆ. (ಏಜೆನ್ಸೀಸ್​)