ಮತ್ತೊಮ್ಮೆ ಭಾರತದ ಮನವಿಯನ್ನು ತಿರಸ್ಕರಿಸಿದ ಪಾಕ್​ ಸರ್ಕಾರ

ಇಸ್ಲಾಮಾಬಾದ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ಭಾರತದ ವಿರುದ್ಧ ಪಾಕಿಸ್ತಾನ ಸದಾ ಕಿಡಿ ಕಾರುತ್ತಿದೆ. ಕಳೆದ ಒಂದುವರೆ ತಿಂಗಳಿಂದ ಒಂದಿಲ್ಲೊಂದು ವಿಷಯದಲ್ಲಿ ಭಾರತವನ್ನು ವಿರೋಧಿಸುತ್ತಲೇ ಇರುವ ಪಾಕಿಸ್ತಾನ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಮಾನ ಪಾಕ್​ ವಾಯುಪ್ರದೇಶವನ್ನು ಬಳಕೆ ಮಾಡುವ ಕುರಿತು ಭಾರತ ಸರ್ಕಾರ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ.

ನರೇಂದ್ರ ಮೋದಿ ಸೆ. 21 ರಿಂದ ಸೆ. 27ರವರೆಗೆ ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಪ್ರಯಾಣಿಸುವ ವಿಮಾನ ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಹಾದು ಹೋಗಲು ಅವಕಾಶ ನೀಡುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು.

ಈ ಕುರಿತು ಬುಧವಾರ ಸಂಜೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮದ್​ ಖುರೇಷಿ ‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಮಾನ ನಮ್ಮ ವಾಯು ಪ್ರದೇಶವನ್ನು ಬಳಸಲು ಅನುಮತಿ ನೀಡದಿರಲು ನಿರ್ಧರಿಸಿದ್ದೇವೆ. ಈ ಕುರಿತು ಪಾಕ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಐಸ್​ಲೆಂಡ್​, ಸ್ವಿಜರ್​ಲೆಂಡ್​ ಮತ್ತು ಸ್ಲೊವೇನಿಯಾ ಪ್ರವಾಸಕ್ಕೆ ತೆರಳಿದ್ದರು. ಅವರ ವಿಮಾನ ಪಾಕ್​ ವಾಯು ಪ್ರದೇಶ ಬಳಸಲು ಅನುಮತಿ ಕೇಳಲಾಗಿತ್ತು. ಆದರೆ ಭಾರತ ಸರ್ಕಾರದ ಮನವಿಯನ್ನು ಪಾಕ್​ ತಿರಸ್ಕರಿಸಿತ್ತು.

ರಾಷ್ಟ್ರಪತಿ ಕೋವಿಂದ್​ ವಿಮಾನ ಪಾಕ್​ ವಾಯುಪ್ರದೇಶ ಬಳಸಲು ಅನಮತಿ ನಿರಾಕರಿಸಿದ ಪಾಕ್​

Leave a Reply

Your email address will not be published. Required fields are marked *