ಟೀಂ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್​ ಧರಿಸಿ ಆಡಿದ್ದಕ್ಕೆ ಕ್ಯಾತೆ ತೆಗೆದ ಪಾಕ್​

ಕರಾಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್​ ಧರಿಸಿ ಆಡಿದ ಟೀಂ ಇಂಡಿಯಾ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್​ ಚೌಧರಿ ಮತ್ತು ವಿದೇಶಾಂಗ ಸಚಿವ ಶಾ ಮೊಹಮದ್​ ಖರೇಶಿ ಟೀಂ ಇಂಡಿಯಾದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತ ತಂಡದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಟೀಂ ಇಂಡಿಯಾ ತಮ್ಮ ನಿಗದಿತ ಕ್ಯಾಪ್​ ಬದಲು ಆರ್ಮಿ ಕ್ಯಾಪ್​ ಧರಿಸಿ ಆಸ್ಟ್ರೇಲಿಯಾ ವಿರುದ್ಧ ಆಡಿರುವುದನ್ನು ಇಡೀ ಪ್ರಪಂಚ ನೋಡಿದೆ. ಇದನ್ನು ಐಸಿಸಿ ಗಮನಿಸಿಲ್ಲವೇ? ಪಾಕಿಸ್ತಾನ ಕ್ರಿಕೆಟ್​ ನಿಯಂತ್ರಣ ಮಂಡಳಿ ದೂರು ನೀಡದಿದ್ದರೂ ಟೀಂ ಇಂಡಿಯಾದ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಐಸಿಸಿ ತನ್ನ ಜವಾಬ್ದಾರಿ ಎಂದು ಖುರೇಶಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಫವಾದ್​ ಚೌಧರಿ ‘ಇದು ಕೇವಲ ಕ್ರಿಕೆಟ್​ ಆಗಿ ಉಳಿದಿಲ್ಲ, ಜಂಟಲ್​ಮ್ಯಾನ್​ ಗೇಮ್​ ಅನ್ನು ರಾಜಕೀಯಗೊಳಿಸಿರುವುದಕ್ಕಾಗಿ ಐಸಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಂಬುತ್ತೇನೆ. ಭಾರತ ತಂಡ ಈ ರೀತಿಯ ವರ್ತನೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪಾಕ್​ ತಂಡ ಸಹ ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಆಡಬೇಕಾಗುತ್ತದೆ. ಪಿಸಿಬಿ ಈ ಕುರಿತು ಐಸಿಸಿಗೆ ದೂರು ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಭಾರತ ಕ್ರಿಕೆಟ್ ತಂಡ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಎಂದಿನ ನೀಲಿ ಬಣ್ಣದ ಕ್ಯಾಪ್ ಬದಲು, ಬಿಸಿಸಿಐ ಲಾಂಛನ ಇದ್ದ ಸೇನೆಯ ಬಣ್ಣದ ಕ್ಯಾಪ್ ಧರಿಸಿ ಕಣಕ್ಕಿಳಿಯಿತು. ಆ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಮರ್ಪಿಸುತ್ತಿರುವುದಾಗಿ ವಿರಾಟ್ ಕೊಹ್ಲಿ ಟಾಸ್ ವೇಳೆ ಹೇಳಿದ್ದರು. ಅದರೊಂದಿಗೆ ರಾಂಚಿ ಏಕದಿನ ಪಂದ್ಯದ ಸಂಭಾವನೆಯನ್ನು ಆಟಗಾರರು ರಾಷ್ಟ್ರೀಯ ರಕ್ಷಣಾ ನಿಧಿಗೆ (ಎನ್​ಡಿಎಫ್) ನೀಡುತ್ತಿರುವುದಾಗಿ ಪ್ರಕಟಿಸಿದ್ದರು. (ಏಜೆನ್ಸೀಸ್​)