ನವದೆಹಲಿ: ಕಾಶ್ಮೀರ ಕಣಿವೆಯಾದ್ಯಂತ ವ್ಯಾಪಕ ಹಿಂಸಾಚಾರ ನಡೆಸಿ, ಅರಾಜಕತೆ ಸೃಷ್ಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರದಲ್ಲಿ ಏನೊಂದು ಸರಿಯಿಲ್ಲ ಎಂದು ಜಾಗತಿಕ ಸಮುದಾಯವನ್ನು ನಂಬಿಸಲು ಪಾಕಿಸ್ತಾನ ಸಜ್ಜಾಗುತ್ತಿದೆ. ಇದಕ್ಕಾಗಿ ಅದು ಅಫ್ಘಾನಿಸ್ತಾನದಲ್ಲಿ ಯುದ್ಧದಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ 100 ಉಗ್ರರನ್ನು ಭಾರತದೊಳಗೆ ನುಸುಳಿಸಲು ಅದು ಮುಂದಾಗಿದೆ ಎಂದು ಭಾರತೀಯ ಬೇಹುಗಾರಿಕಾ ಪಡೆ ಮಾಹಿತಿ ನೀಡಿದೆ.
ಕಾಶ್ಮೀರ ಕಣಿವೆಯಲ್ಲಿರುವ ಉಗ್ರರಿಗೆ ಸೂಕ್ತವಾದ ತರಬೇತಿ ಇಲ್ಲ. ಜತೆಗೆ ಅಲ್ಲಿ ನಾಯಕತ್ವದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಮೂಲದ ಉಗ್ರರನ್ನು ಭಾರತದೊಳಗೆ ನುಸುಳಿಸಲು ಪಾಕಿಸ್ತಾನ ಹುನ್ನಾರ ನಡೆಸಿದೆ ಎನ್ನಲಾಗಿದೆ.
ಪಾಕ್ನಿಂದ ಭಾರತದೊಳಗೆ ನುಸುಳುವ 100ಕ್ಕೂ ಹೆಚ್ಚು ಉಗ್ರರು ಗುಂಪಾಗಿ ಹಂಚಿ ಹೋಗಿ, ಮುಂದಿನ ಕೆಲವು ವಾರಗಳಲ್ಲಿ ಭಾರತದಾದ್ಯಂತ ಪ್ರಮುಖ ಸ್ಥಳಗಳಲ್ಲಿ ದಾಳಿಗಳನ್ನು ಸಂಘಟಿಸುವ ಸಾಧ್ಯತೆ ಇರುವುದಾಗಿಯೂ ಬೇಹುಗಾರಿಕಾ ಪಡೆ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ತಾನದ ಉಗ್ರರನ್ನು ಕಾಶ್ಮೀರ ಕಣಿವೆಯೊಳಗೆ ನುಸುಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಭವಾಲ್ಪುರದಲ್ಲಿರುವ ಜೈಷ್ ಎ ಮೊಹಮ್ಮದ್ನ ಕೇಂದ್ರ ಕಾರಸ್ಥಾನದಲ್ಲಿ ಜೈಷ್ನ ಪ್ರಮುಖ ಉಗ್ರ ಮೌಲಾನ ಮಸೂದ್ ಅಜರ್ನ ಸಹೋದರ ಮುಫ್ತಿ ರೌಫ್ ಅಸ್ಗರ್ ಭಯೋತ್ಪಾದನಾ ಸಂಘಟನೆಯ ಪ್ರಮುಖ ಉಗ್ರರೊಂದಿಗೆ ಚರ್ಚಿಸಿದ್ದಾನೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಪುಲ್ವಾಮಾ ದಾಳಿ ಮಾದರಿಯ ದಾಳಿಗಳು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಸುತ್ತಲೇ ಇದ್ದಾರೆ.