ಕಪಿಲ್​ ದೇವ್​ರ 36 ವರ್ಷದ ಹಿಂದಿನ ದಾಖಲೆಯನ್ನು ಬ್ರೇಕ್​ ಮಾಡಿದ ಪಾಕ್​ ಯುವ ಆಟಗಾರ!

ನವದೆಹಲಿ: ಟೀಂ ಇಂಡಿಯಾಗೆ ಮೊದಲ ಬಾರಿ ವಿಶ್ವಕಪ್​ ಕಿರೀಟ ಮುಡಿಗೇರಿಸಿದ ನಾಯಕ ಕಪೀಲ್​ ದೇವ್​ ಅವರ ದಾಖಲೆಯನ್ನು ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಇಮಾಮ್​ ಉಲ್​ ಹಕ್​ ಅವರು ಸರಿಗಟ್ಟಿದ್ದಾರೆ.

ಏಕದಿನ ಪಂದ್ಯದಲ್ಲಿ 150ಕ್ಕಿಂತ ಹೆಚ್ಚು ರನ್​ ಗಳಿಸಿದ ಯುವ ಆಟಗಾರನೆಂಬ ದಾಖಲೆ ಈ ಮೊದಲು ಕಪಿಲ್​ ದೇವ್​ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಇಮಾಮ್​ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

1983ರ ವಿಶ್ವಕಪ್​ ಟೂರ್ನಿಯಲ್ಲಿ ಜಿಬಾಂಬ್ವೆ ತಂಡದ ವಿರುದ್ಧ ಕಪಿಲ್​ ದೇವ್​ ಅಜೇಯ 175 ರನ್​ ಗಳಿಸಿದ್ದರು. ಆಗ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಇದಾದ 36 ವರ್ಷಗಳ ಬಳಿಕ 23 ವರ್ಷದ ಇಮಾಮ್​ ಇಂಗ್ಲೆಂಡ್​ ವಿರುದ್ಧ 131 ಎಸೆತಗಳಲ್ಲಿ 151 ರನ್​ ಬಾರಿಸುವ ಮೂಲಕ ಕಪಿಲ್​ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

ನಿನ್ನೆ(ಮಂಗಳವಾರ) ಇಂಗ್ಲೆಂಡ್​ನ ಬ್ರಿಸ್ಟೋಲ್​ನ ಕೌಂಟಿ ಗ್ರೌಂಡ್​​ ಕ್ರೀಡಾಂಗಣದಲ್ಲಿ ನಡೆದ ಐದು ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ ಇಮಾಮ್​ ಉಲ್​ ಹಕ್​ ಅವರ ಭರ್ಜರಿ ಶತಕ(151 ರನ್​, 131 ಎಸೆತ, 16 ಬೌಂಡರಿ, 1 ಸಿಕ್ಸರ್​) ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 358 ರನ್​ ಗಳಿಸಿತ್ತು.

ಬೃಹತ್​ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ ಜಾನಿ ಬೈರ್​ಸ್ಟೋ(128 ರನ್​, 93 ಎಸೆತ, 15 ಬೌಂಡರಿ, 5 ಸಿಕ್ಸರ್​) ಹಾಗೂ ಜಾಸನ್​ ರಾಯ್​(76 ರನ್​, 55 ಎಸೆತ, 8 ಬೌಂಡರಿ, 4 ಸಿಕ್ಸರ್​) ಅಬ್ಬರದ ಆಟದ ನೆರವಿನಿಂದ 44.5 ಓವರ್​ಗಳಲ್ಲೇ 4 ವಿಕೆಟ್​ ನಷ್ಟಕ್ಕೆ 359 ರನ್​ ಕಲೆಹಾಕುವ ಮೂಲಕ 2-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.(ಏಜೆನ್ಸೀಸ್​)