‘ಗೇಮ್​ ಚೇಂಜರ್’​ ಆತ್ಮಚರಿತ್ರೆ ಅರ್ಧಕ್ಕರ್ಧ ಸುಳ್ಳಿನ ಕಂತೆ: ಅಫ್ರಿದಿ ವಿರುದ್ಧವೇ ಸಿಡಿದೆದ್ದ ಪಾಕ್​ ಆಟಗಾರನ್ಯಾರು?

ಇಸ್ಲಮಾಬಾದ್​: ತಮ್ಮ ಆತ್ಮಚರಿತ್ರೆ ‘ಗೇಮ್​ ಚೇಂಜರ್’ ಮೂಲಕ ಕೆಲವು ಅಂಶಗಳನ್ನು ಬಹಿರಂಗಪಡಿಸುವುದರೊಂದಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಅವರು ಎಲ್ಲರ ಹುಬ್ಬೇರಿಸಿದ್ದರು. ತಮ್ಮ ನಿಜವಾದ ವಯಸ್ಸನ್ನು ತಿಳಿಸುವುದರೊಂದಿಗೆ ಪಾಕ್​ ಮಾಜಿ ಆಟಗಾರರಾದ ಜಾವೇದ್​ ಮಿಯಾಂದಾದ್​, ವಾಕರ್​ ಯೂನೀಸ್​ ಹಾಗೂ ಭಾರತದ ಮಾಜಿ ಆಟಗಾರ ಗೌತಮ್​ ಗಂಭೀರ್ ವಿರುದ್ಧ ಬರೆಯುವ ಮೂಲಕ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ತನ್ನ ಮೇಲೆ ಅಫ್ರಿದಿ ಮಾಡಿದ ಆರೋಪಕ್ಕೆ ಗಂಭೀರ್​ ತಿರುಗೇಟು ನೀಡಿದ್ದರು. ಬಳಿಕ ಇಬ್ಬರ ನಡುವಿನ ವಾಕ್ಸಮರ ಸುದ್ದಿಯಾಗಿತ್ತು. ಇದೀಗ ಪಾಕ್​ ತಂಡದ ಆಟಗಾರನೇ ಅಫ್ರಿದಿ ವಿರುದ್ಧ ತಿರುಗಿಬಿದ್ದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪಾಕ್​ನ ಮಾಜಿ ಆಟಗಾರರ ವಿರುದ್ಧ ಅಫ್ರಿದಿ ಹೇಳಿರುವ ಮಾತುಗಳ ಬಗ್ಗೆ ಇಮ್ರಾನ್​ ಫರ್ಹಾತ್ ಕಿಡಿಕಾರಿದ್ದಾರೆ.​

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಇಮ್ರಾನ್​ ಫರ್ಹಾತ್, ಪಾಕಿಸ್ತಾನದ ಕೆಲವು ಲೆಜೆಂಡರಿ ಕ್ರಿಕೆಟಿಗರ ಹೆಸರನ್ನು ಬಳಸಿ, ಅವರ ವಿರುದ್ಧ ಆರೋಪ ಮಾಡುವುದಕ್ಕೂ ಹಾಗೂ 20 ವರ್ಷಗಳಿಂದ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿಕೊಂಡು ಬಂದಿರುವ ಅಫ್ರಿದಿಗೆ ನಾಚಿಕೆಯಾಗಬೇಕು ಎಂದು ಜರಿದಿದ್ದಾರೆ.

ನಾನು ಸಂತ ಎಂದು ಹೇಳಿಕೊಳ್ಳುವ ಅಫ್ರಿದಿ ಅವರ ಬಗ್ಗೆ ಹೇಳಲು ತುಂಬಾ ಕತೆಗಳಿವೆ. ಅವರ ಜತೆ ಆಡಿರುವುದು ಸಂತೋಷವೇ ಸರಿ. ಅಫ್ರಿದಿ ರಾಜಕಾರಣಿಯಾಗಲು ಅವರ ಪ್ರತಿಭೆಯೇ ಸಾಕು ಎಂದು ವ್ಯಂಗ್ಯವಾಡಿದ್ದಾರೆ.

ಪಾಕ್​ ಪರ 40 ಟೆಸ್ಟ್​ ಹಾಗೂ 58 ಏಕದಿನ ಪಂದ್ಯಗಳನ್ನು ಆಡಿರುವ ಇಮ್ರಾನ್​ ಫರ್ಹಾತ್, ಅಫ್ರಿದಿ ಅವರು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಕ್ರಿಕೆಟಿಗರು ಈ ಬಗ್ಗೆ ಮಾತನಾಡಿ, ಸತ್ಯ ತಿಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅಫ್ರಿದಿ ಒಬ್ಬ ಸ್ವಾರ್ಥ ಆಟಗಾರ. ತನ್ನ ಸ್ವಾರ್ಥ ಸಾಧನೆಗಾಗಿ ಹಲವು ಆಟಗಾರರ ಕೆರಿಯರ್​ ಅನ್ನು ನಾಶ ಮಾಡಿದ್ದಾನೆ. ಸುಮ್ಮನೇ ಕೂರಬೇಡಿ ಆತನ ಆರೋಪಕ್ಕೆ ಸತ್ಯವನ್ನು ತಿಳಿಸುವುದರ ಮೂಲಕ ತಿರುಗೇಟು ನೀಡಿ ಎಂದು ಲೆಜೆಂಡರಿ ಕ್ರಿಕೆಟಿಗರನ್ನು ಹುರಿದುಂಬಿಸಿದ್ದಾರೆ.

‘ಗೇಮ್​ ಚೇಂಜರ್​’ ಆತ್ಮಚರಿತ್ರೆ ಬಿಡುಗಡೆಯಾದಾಗಿನಿಂದ ಸಾಕಷ್ಟು ವಿವಾದದ ಅಲೆ ಹಬ್ಬಿದ್ದು, ಸದ್ಯದ ಬೆಳವಣಿಗೆಯಂತೆ ಅಫ್ರಿದಿ ಆತ್ಮಚರಿತ್ರೆಯ ಮತ್ತಷ್ಟು ಮುದ್ರಣಗಳನ್ನು ತಡೆಯುವಂತೆ ಪಾಕ್​ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. (ಏಜೆನ್ಸೀಸ್​)