ಪಾಕಿಸ್ತಾನ ಬಲೆಯಲ್ಲಿ ಭಾರತದ 418 ಮೀನುಗಾರರು

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಉಡುಪಿ ಮಲ್ಪೆ ಫಿಷಿಂಗ್ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ನಾಪತ್ತೆ ಪ್ರಕರಣ ದೇಶದ ಗಮನ ಸೆಳೆದಿದ್ದು, ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ಸೆರೆಯಾಗಿರುವ ದೇಶದ ಮೀನುಗಾರರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಭಾರತದ ಕಸ್ಟಡಿಯಲ್ಲಿ ಪಾಕಿಸ್ತಾನದ 108 ಮೀನುಗಾರರು, 249 ನಾಗರಿಕರು ಇದ್ದಾರೆ. ಪಾಕಿಸ್ತಾನ ಸರ್ಕಾರದ ವರದಿ ಪ್ರಕಾರ ಪಾಕ್ ವಶದಲ್ಲಿ ಭಾರತದ 418 ಮೀನುಗಾರರು, 53 ನಾಗರಿಕರು ಇದ್ದಾರೆ. ಭಾರತ-ಪಾಕಿಸ್ತಾನ 2008ರ ಮೇ 21ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ನಾಗರಿಕರು ಮತ್ತು ಮೀನುಗಾರರ ಹಸ್ತಾಂತರಕ್ಕೆ ಒಪ್ಪಿಕೊಳ್ಳಲಾಗಿದೆ.

ಈ ಪ್ರಕಾರ ಇಲ್ಲಿಯವರೆಗೂ ಪಾಕ್ ಕಳೆದ 3 ವರ್ಷದಲ್ಲಿ 17 ನಾಗರಿಕರನ್ನು,1540 ಮೀನುಗಾರರನ್ನು ಹಸ್ತಾಂತರಿಸಿದೆ. ಭಾರತ 135 ನಾಗರಿಕರನ್ನು, 183 ಮೀನುಗಾರರನ್ನು ಬಿಡುಗಡೆ ಮಾಡಿದೆ. ಇನ್ನೂ 83 ಭಾರತೀಯರು ಕಾಣೆಯಾಗಿದ್ದು, ಯಾವುದೇ ಸುಳಿವು ಲಭಿಸಿಲ್ಲ. ಅವರು ಪಾಕ್ ವಶದಲ್ಲಿರುವ ಸಾಧ್ಯತೆ ಇದೆ.

ಈ ಮಧ್ಯೆ ಮಲ್ಪೆ ಫಿಷಿಂಗ್ ಬಂದರಿನಿಂದ ಡಿ.13ರ ಬೆಳಗಿನ ಜಾವ 1 ಗಂಟೆಗೆ ಆಳ ಸಮುದ್ರ ಮೀನುಗಾರಿಕೆಗೆ ಸುವರ್ಣ ತ್ರಿಭುಜ ಬೋಟ್ ಮಾಲೀಕ ಚಂದ್ರಶೇಖರ್ ಮತ್ತು ದಾಮೋದರ್ ಬಡನಿಡಿಯೂರ್, ಲಕ್ಷ್ಮಣ ಕುಮಟಾ, ಸತೀಶ್ ಕುಮಟಾ, ರವಿ ಮಂಕಿ, ಹರೀಶ್ ಕುಮಟಾ, ರಮೇಶ್ ಕುಮಟಾ ಮತ್ತು ಜೋಗಯ್ಯ ಕುಮಟಾ ಜತೆಗೂಡಿ ತೆರಳಿದವರು ಡಿ.22ಕ್ಕೆ ವಾಪಸ್ ಬರಬೇಕಿತ್ತು. ಆದರೆ, ಇಷ್ಟು ದಿನ ಕಳೆದರೂ ಸುಳಿವು ಕೂಡ ಲಭ್ಯವಾಗಿಲ್ಲ.

ಡಿ.16ರ ಬೆಳಗಿನ ಜಾವ 1 ಗಂಟೆಗೆ ಗೋವಾ ಹತ್ತಿರ ಮೀನುಗಾರಿಕೆ ಮಾಡುತ್ತಿರುವುದಾಗಿ ಹೇಳಿರುವುದು ಬಿಟ್ಟರೆ ಬಳಿಕ ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗೆಂದು ಪಾಕ್​ನ ಸೆರೆಯಾಗಿದ್ದಾರೆ ಎನ್ನಲೂ ಸಾಧ್ಯವಿಲ್ಲ. ಇಲ್ಲಿಯವರೆಗೂ ಪಾಕ್ ಗಡಿಯವರೆಗೂ ರಾಜ್ಯದ ಮೀನುಗಾರರು ತಲುಪಿರುವ ಪ್ರಕರಣಗಳು ದಾಖಲಾಗಿಲ್ಲ. ಹೆಚ್ಚೆಂದರೆ ಮಲ್ಪೆ ಮೀನುಗಾರರು ಮಹಾರಾಷ್ಟ್ರ-ಗೋವಾ ಗಡಿಭಾಗದಲ್ಲಿ ಮೀನುಗಾರಿಕೆ ಮಾಡುತ್ತಾರೆ ಎನ್ನುತ್ತಾರೆ ಮೀನುಗಾರರು.

ಈಗಾಗಲೇ ಕರಾವಳಿ ಕಾವಲು ಪಡೆ ಪೊಲೀಸರು, ಭಾರತೀಯ ನೌಕಾದಳ, ಭಾರತೀಯ ಕರಾವಳಿ ಕಾವಲು ಪಡೆಯ ಎಲ್ಲ ಠಾಣೆಗಳು ಹುಡುಕಾಟ ನಡೆಸುತ್ತಿವೆೆ. ಗೋವಾ- ಮಹಾರಾಷ್ಟ್ರದ ಅಧಿಕಾರಿಗಳ ಸಂಪರ್ಕದಲ್ಲಿ ಪೊಲೀಸರು ಇದ್ದಾರೆ. ಕಾಣೆಯಾದ ಬೋಟ್ ಮತ್ತು ಮೀನುಗಾರರ ಮಾಹಿತಿ ಸಿಕ್ಕಲ್ಲಿ ತಿಳಿಸುವಂತೆ ರಾಜ್ಯ ಪೊಲೀಸ್ ಇಲಾಖೆ ಕೋರಿದೆ.

ಮಹಾ, ಗುಜರಾತಿಯರೇ ಹೆಚ್ಚು

ಮಹಾರಾಷ್ಟ್ರ-ಗುಜರಾತ್ ಮೀನುಗಾರರು ಪಾಕಿಸ್ತಾನ ಸೇನೆಗೆ ಸಿಲುಕುವುದು ಹೆಚ್ಚು. ಹೆಚ್ಚು ಮೀನು ಹಿಡಿಯಲು, ಗಡಿ ರೇಖೆ ಗೊತ್ತಾಗದೆ ಅಥವಾ ಉದ್ದೇಶಪೂರ್ವಕವಾಗಿ ಗಡಿದಾಟಿದ ಆರೋಪದ ಮೇಲೆ ಭಾರತೀಯರನ್ನು ಪಾಕ್ ಸೇನೆ ಸೆರೆ ಹಿಡಿದು ಬ್ಲಾ್ಯಕ್​ವೆುೕಲ್ ಮಾಡುತ್ತದೆ.

ದರೋಡೆಕೋರರಿಗೆ ಸಿಲುಕಿದರೇ?

ರಾಜ್ಯದ ಮೀನುಗಾರು ನೆರೆಯ ಕೇರಳ, ಗೋವಾ, ಮಹಾರಾಷ್ಟ್ರ ಗಡಿಯಲ್ಲಿ ಮೀನುಗಾರಿಕೆಗೆ ಆಕಸ್ಮಿಕವಾಗಿ ಅಥವಾ ಹೆಚ್ಚು ಮೀನು ಹಿಡಿಯುವ ಉದ್ದೇಶಕ್ಕೆ ಗಡಿದಾಟುತ್ತಾರೆ. ಇದು ನೆರೆ ರಾಜ್ಯದ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿ ಘರ್ಷಣೆಗಳು ನಡೆಯುತ್ತವೆ. ಇಲ್ಲವೆ ದರೋಡೆಕೋರರ ಗ್ಯಾಂಗ್ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಬೋಟ್ ಕಳವು ಮಾಡಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಉಗ್ರರಿಗೆ ಸೆರೆಯಾದರೆ?

ಸಮುದ್ರ ಮಾರ್ಗದಲ್ಲಿ ಪಾಕ್ ಉಗ್ರರು ಭಾರತ ತಲುಪಿ ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಗುಜರಾತ್-ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹೀಗಾಗಿ ಉಗ್ರರೇನಾದರೂ ಗೋವಾ ತಲುಪಿದಾಗ ರಾಜ್ಯದ ಮೀನುಗಾರರು ಸಿಲುಕಿದರಾ ಎಂಬ ಅನುಮಾನಗಳೂ ಇವೆ.