ಪಾಕ್​ನಿಂದ ಸರ್ಜಿಕಲ್ ಸ್ಕೆಚ್

<< ​ಭಾರತೀಯ ಸೇನೆಗೆ ಎಚ್ಚರಿಕೆ ನೀಡಿದ ಗುಪ್ತಚರ ದಳ >>

ನವದೆಹಲಿ: ಭಾರತ ನಡೆಸಿದ್ದ ಸರ್ಜಿಕಲ್ ದಾಳಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಉಗ್ರರ ಜತೆ ಕೈಜೋಡಿಸಿರುವ ಪಾಕಿಸ್ತಾನ ಸೇನೆ ಕಾಶ್ಮೀರ ಗಡಿಯಲ್ಲಿ ಸಿದ್ಧತೆ ನಡೆಸಿರುವ ಆತಂಕಕಾರಿ ಮಾಹಿತಿಯನ್ನು ಗುಪ್ತಚರದಳ ಬಯಲಿಗೆಳೆದಿದೆ. ಪಾಕಿಸ್ತಾನ ಸೇನೆಯ ಸಣ್ಣ ತಂಡ ಹಾಗೂ ಲಷ್ಕರ್ ಉಗ್ರ ಸಂಘಟನೆ ಒಟ್ಟುಗೂಡಿವೆ. ಕಾಶ್ಮೀರದ ರಜೌರಿ ಹಾಗೂ ಪೂಂಚ್ ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಉಗ್ರರನ್ನು ಈ ದಾಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ಗುಪ್ತಚರ ದಳ ಎಚ್ಚರಿಸಿದೆ. 2016ರಲ್ಲಿ ಭಾರತ ಪಾಕಿಸ್ತಾನದ ಉಗ್ರ ನೆಲೆ ಮೇಲೆ ಸರ್ಜಿಕಲ್ ದಾಳಿ ನಡೆಸಿ ಬಳಿಕ ಪಾಕಿಸ್ತಾನ ಪ್ರತೀಕಾರಕ್ಕೆ ಸಂಚು ರೂಪಿಸುತ್ತಲೇ ಇದೆ. ದಾಳಿ ಯತ್ನಗಳು ಹಲವು ಭಾರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಉಗ್ರರ ಜತೆ ಕೈಜೋಡಿಸಿರುವುದಾಗಿ ತಿಳಿದು ಬಂದಿದೆ. ಗಡಿ ದಾಟಿ ಪುಂಡಾಟ ನಡೆಸುತ್ತಿದ್ದ ಪಾಕ್ ಉಗ್ರರ ಹುಟ್ಟಡಗಿಸುವುದಕ್ಕಾಗಿ ಭಾರತ ನಡೆಸಿದ್ದ ಸರ್ಜಿಕಲ್ ದಾಳಿಗೆ 20 ಉಗ್ರರು ಹತರಾಗಿದ್ದರು.