ಶ್ರೀನಗರ: ಪುಲ್ವಾಮಾ ಉಗ್ರನ ದಾಳಿಯ ಹಿನ್ನೆಲೆಯಲ್ಲಿ ಭಾರತ ತನ್ನ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಯುದ್ಧ ಸಂಬಂಧಿತ ತಯಾರಿಯನ್ನು ಆರಂಭಿಸಿದೆ. ಬಲೂಚಿಸ್ತಾನದಲ್ಲಿ ಸ್ಥಿತವಾಗಿರುವ ಮಿಲಿಟರಿ ನೆಲೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಆಡಳಿತಕ್ಕೆ ಪತ್ರಗಳನ್ನು ರವಾನಿಸಿ, ಯುದ್ಧವಾಗುವ ಸಾಧ್ಯತೆ ಇದ್ದು, ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿದ್ದಾರೆ.
ಕ್ವೆಟ್ಟಾದ ಪಾಕ್ ಸೇನಾ ನೆಲೆಯ ಅಧಿಕಾರಿಗಳು ಕ್ವೆಟ್ಟಾ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಜಿಲಾನಿ ಆಸ್ಪತ್ರೆಯ ಅಧಿಕಾರಿಗಳಿಗೆ ಫೆ.20ರಂದು ಪತ್ರ ಬರೆದು ಗಾಯಾಳು ಯೋಧರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಪೂರ್ವ ಪ್ರಾಂತ್ಯದಲ್ಲಿ ಯುದ್ಧ ಉಂಟಾದಲ್ಲಿ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಿಂದ ಕ್ವೆಟ್ಟಾಕ್ಕೆ ಗಾಯಾಳು ಯೋಧರು ಬರುವ ಸಾಧ್ಯತೆ ಇದೆ. ಇಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಬಲೂಚಿಸ್ತಾನದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅವರನ್ನು ಸ್ಥಳಾಂತರಿಸಲಾಗುವುದು. ಸಿವಿಲ್ ಮಿಲಿಟರಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಆಗುವವರೆಗೆ ಅವರನ್ನು ಬಲೂಚಿಸ್ತಾನದ ಆಸ್ಪತ್ರೆಗಳಲ್ಲೇ ಇರಿಸಲಾಗುವುದು ಎಂದು ಫೋರ್ಸ್ ಕಮಾಂಡರ್ ಆಸಿಯಾ ನಾಜ್ ಜಿಲಾನಿ ಆಸ್ಪತ್ರೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.