ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ

ಇಸ್ಲಾಮಾಬಾದ್​: ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಮುನಿದಿರುವ ಭಾರತಕ್ಕೆ ಬೆದರಿದ ಪಾಕಿಸ್ತಾನ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶ ಮಾಡುವಂತೆ ಕೋರಿ ವಿಶ್ವ ಸಂಸ್ಥೆಗೆ ಮೊರೆ ಹೋಗಿದೆ.

ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟರ್ರೆಸ್ ಅವರಿಗೆ ಪತ್ರ ಬರೆದಿರುವ ವಿದೇಶಾಂಗ ಇಲಾಖೆ ಸಚಿವ ಶಾ ಮಹಮೂದ್​ ಖುರೇಶಿ, ” ಪುಲ್ವಾಮ ಘಟನೆ ನಂತರ ಭಾರತ ತನ್ನ ರಕ್ಷಣಾ ಪಡೆಯನ್ನು ಪಾಕಿಸ್ತಾನದ ವಿರುದ್ಧ ಪ್ರಯೋಗಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ನೆಲದಲ್ಲಿ ಆಭದ್ರತೆಯ ವಾತಾವರಣ ತಲೆದೋರಿದೆ. ಈ ವಿಚಾರದಲ್ಲಿ ನಾನು ತಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇನೆ. ತಾವು ಕೂಡಲೇ ಮಧ್ಯಪ್ರವೇಶಿಸಿ ಆತಂಕ ನಿವಾರಣೆ ಮಾಡಬೇಕು,” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಪಾಕಿಸ್ತಾನ ಮೂಲದ ಜೈಷ್​ ಎ ಮೊಹಮದ್​ ಉಗ್ರ ಸಂಘಟನೆಯೂ ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲೆ ದಾಳಿ ನಡೆಸಿತ್ತು. ಘಟನೆಯಲ್ಲಿ 40 ಯೋಧರು ಮಡಿದಿದ್ದರು. ಇದಾದ ನಂತರದ ಬೆಳವಣಿಗೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶಗೊಂಡಿದೆ. ಪಾಕಿಸ್ತಾನಕ್ಕೆ ನೀಡಿದ್ದ ವಿಶ್ವಸನೀಯ ದೇಶದ ಸ್ಥಾನವನ್ನು ಕಿತ್ತುಕೊಂಡಿದೆ. ಅಲ್ಲದೆ, ಭಾರತದಲ್ಲಿ ಯುದ್ಧದ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರತೀಕಾರದ ಮುನ್ಸೂಚನೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯದಿಂದ ಪಾರಾಗಲು ಪಾಕಿಸ್ತಾನ ಈ ರಾಜತಾಂತ್ರಿಕ ನಡೆ ಅನುಸರಿಸಿದೆ.

One Reply to “ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ”

  1. ಕಚಡಾ ಜನಗಳಿಂದ ತುಂಬಿರುವ ಅಸಹ್ಯಕರ ದೇಶ!

Comments are closed.