ಇಸ್ಲಾಮಾಬಾದ್: ಅನುಮತಿ ಇಲ್ಲದೆ ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿದೆ. ಅಧಿಕೃತ ಮಾಹಿತಿ ಮತ್ತು ದಾಖಲೆಗಳ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಾಕ್ ಸರ್ಕಾರ ಸ್ಪಷ್ಟನೆ ನೀಡಿದೆ.
ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, ಸರ್ಕಾರಿ ನೌಕರರ (ನಡತೆ) ನಿಯಮಗಳು, 1964ರ ಅಡಿಯಲ್ಲಿ ಸರ್ಕಾರಿ ನೌಕರರು ಸರ್ಕಾರದ ಸೂಚನೆಗೆ ಬದ್ಧವಾಗಿರಲು ತಿಳಿಸಲಾಗಿದೆ. ಆದೇಶದ ಪ್ರಕಾರ, ಅನುಮತಿಯಿಲ್ಲದೆ ಸರ್ಕಾರಿ ನೌಕರರು ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಯನ್ನು ಬಳಸುವಂತಿಲ್ಲ ಎಂದು ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಸರ್ಕಾರಿ ನೌಕರರು ಸರ್ಕಾರದ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುವ ಅಭಿಪ್ರಾಯಗಳನ್ನು ಅಥವಾ ವಿಚಾರಗಳನ್ನು ವ್ಯಕ್ತಪಡಿಸಲು ಹಾಗೂ ಸರ್ಕಾರದ ನೀತಿ, ನಿರ್ಧಾರಗಳು, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಘನತೆಗೆ ವಿರುದ್ಧವಾಗಿ ಮಾತನಾಡಲು ಅನುಮತಿ ಇಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ, ಅಂತಹ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.
ಇದಿಷ್ಟೇ ಅಲ್ಲದೆ, ಸರ್ಕಾರಿ ನೌಕರರು ಸಂಬಂಧವಿಲ್ಲದ ವ್ಯಕ್ತಿಗಳೊಂದಿಗೆ ಅಧಿಕೃತ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಇತರ ರಾಷ್ಟ್ರಗಳೊಂದಿಗೆ ಪಾಕಿಸ್ತಾನದ ಸಂಬಂಧಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ. ಪಾಕಿಸ್ತಾನದ ವಿಚಾರ ಹೊರಗಿನವರಿಗೆ ಗೊತ್ತಾದರೆ ದೇಶಕ್ಕೆ ಅವಮಾನ ಆಗುತ್ತದೆ ಎಂದು ಹೇಳಿದೆ.
ಎಲ್ಲ ಸರ್ಕಾರಿ ನೌಕರರು ಈ ಸೂಚನೆಗಳನ್ನು ಅನುಸರಿಸಲು ಬದ್ಧರಾಗಿರಬೇಕು. ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕಾರಣವಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್)
ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ: ಸುಟ್ಟು ಕರಕಲಾದ ನಾಲ್ವರು ಭಾರತೀಯರು, DNA ಮೂಲಕ ಗುರುತು ಪತ್ತೆ