ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ನವದೆಹಲಿ: ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆಯು ಹಿಮ್ಮೆಟ್ಟಿದ ಬಳಿಕ ವಾಪಸ್‌ ಹೋಗಿದೆ.

ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿತ್ತು.

ಪಾಕಿಸ್ತಾನ ಡ್ರೋಣ್‌ ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಮುಂದಾಗಿತ್ತು. ಈ ವೇಳೆ ಗಡಿ ಭದ್ರತಾ ಪಡೆಯು ಡ್ರೋಣ್‌ ಅನ್ನು ಪತ್ತೆಹಚ್ಚಿ ಶೂಟ್‌ ಮಾಡಲು ಯತ್ನಿಸಿದಾಗ ಮರಳಿ ಪಾಕ್‌ಗೆ ಹಿಂತಿರುಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ಭಾರತವನ್ನು ಪ್ರವೇಶಿಸಲು ಯತ್ನಿಸಿರುವ ಎರಡನೇ ಡ್ರೋಣ್‌ ಇದಾಗಿದ್ದು, ಶ್ರೀರಂಗನಗರದ ಸಮೀಪ ಹಿಂದುಮಲ್‌ಕೋಟ್‌ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ಮುಂಜಾನೆ 5 ಗಂಟೆ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್‌ ಕಂಡ ನಂತರ ಸಿಬ್ಬಂದಿ ಫೈರಿಂಗ್‌ ನಡೆಸಿ ಅದನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ಪಶ್ಚಿಮ ಗಡಿಯುದ್ದಕ್ಕೂ ಇರುವ ಗ್ರಾಮಸ್ಥರಿಗೂ ಭಾರಿ ಫೈರಿಂಗ್‌ ಸದ್ದು ಕೇಳಿಬಂದಿದೆ. ಬಳಿಕ ಡ್ರೋಣ್‌ ಗಡಿ ಮೂಲಕವೇ ಪಾಕ್‌ಗೆ ಸುರಕ್ಷಿತವಾಗಿ ಹಿಂತಿರುಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)