ಪಾಕ್​ನಲ್ಲಿರುವ ಉಗ್ರರಿಂದ ಭಾರತ ಉಪಖಂಡಕ್ಕೆ ಅಪಾಯ: ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನದಲ್ಲಿರುವ ಜೈಷ್​ ಎ ಮೊಹಮ್ಮದ್​ ಮತ್ತು ಲಷ್ಕರ್ -ಎ-ತೊಯ್ಬಾ ಉಗ್ರ ಸಂಘಟನೆಗಳಿಂದ ಉಪಖಂಡಕ್ಕೆ ಅಪಾಯವಿದೆ. ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿರುವ ಅಲ್​ ಖೈದಾ ಸಂಘಟನೆ ತನ್ನ ಶಕ್ತಿಯನ್ನು ಕಳೆದುಕೊಂಡಿದೆ, ಆದರೆ ಭಾರತ ಉಪಖಂಡದಲ್ಲಿರುವ ಅಲ್​ ಖೈದಾ ಸಂಘಟನೆ ಸಕ್ರಿಯವಾಗಿದ್ದು, ಈ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸುತ್ತಿದೆ. ಇವುಗಳ ಜತೆಯಲ್ಲೇ ಹಕ್ಕಾನಿ ನೆಟ್​ವರ್ಕ್​ನ ಉಗ್ರರೂ ಸಹ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಎಂದು ಅಮೆರಿಕ 2017ನೇ ವರ್ಷದಲ್ಲಿ ಭಯೋತ್ಪಾದನೆ ಎಂಬ ವಿಷಯದ ಕುರಿತು ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜತೆಗೆ ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಲಷ್ಕರ್ -ಎ-ತೊಯ್ಬಾ ಮತ್ತು ಜಮಾತ್​ ಉದ್​ ದವಾ ಉಗ್ರ ಸಂಘಟನೆಗಳ ನಾಯಕ ಹಫೀಜ್​ ಸಯೀದ್​ನನ್ನು 2017ರ ಜನವರಿಯಲ್ಲಿ ಬಂಧಿಸಿತ್ತು. ಆದರೆ ಪಾಕಿಸ್ತಾನದ ಕೋರ್ಟ್​ ಆತನನ್ನು 2017ರ ನವೆಂಬರ್​ನಲ್ಲಿ ಗೃಹ ಬಂಧನದಿಂದ ಬಿಡುಗಡೆ ಮಾಡಿತ್ತು. ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರಂತರವಾಗಿ ವಿಫಲವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಾಕ್​ ಉಗ್ರರನ್ನು ಹತೋಟಿ ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪಾಕಿಸ್ತಾನಕ್ಕೆ ಉಗ್ರರನ್ನು ಹತೋಟಿ ಮಾಡಲು ನೀಡುವ ಅನುದಾನವನ್ನು ರದ್ದುಗೊಳಿಸಿದ್ದಾರೆ. (ಏಜೆನ್ಸೀಸ್​)